ನಿವೃತ್ತ ಸರ್ಕಾರಿ ನೌಕರರಿಗೆ ‘ಸಂಧ್ಯಾಕಿರಣ’ ಆರೋಗ್ಯ ಯೋಜನೆ: ಸಚಿವ ಯು.ಟಿ. ಖಾದರ್ ಘೋಷಣೆ

ಮಂಗಳೂರು:ನಿವೃತ್ತ ಸರ್ಕಾರಿ ನೌಕರರ ಆರೋಗ್ಯ ಸುರಕ್ಷತೆಗೆ 60ರಿಂದ 70 ವರ್ಷ ವಯಸ್ಸಿನವರೆಗೆ ‘ಸಂಧ್ಯಾಕಿರಣ’ ಆರೋಗ್ಯ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ನಿವೃತ್ತ ನೌಕರರು ತಮ್ಮ ಪಿಂಚಣಿಯ ಶೇ.1.25ರಷ್ಟು ಮೊತ್ತವನ್ನು ಪಾವತಿಸಬೇಕಿದ್ದು, ಕುಟುಂಬದವರಿಗೂ ಆರೋಗ್ಯ ಸೌಲಭ್ಯ ದೊರೆಯಲಿದೆ. ನೌಕರರ ನಿಧನದ ಬಳಿಕ ಕುಟುಂಬ ಪಿಂಚಣಿಯಿಂದ ಶೇ.0.75ರಷ್ಟು ಪಾವತಿಸಿದರೆ ಯೋಜನೆ ಮುಂದುವರಿಯಲಿದೆ ಎಂದರು.

ಕೇಂದ್ರದ ವಯೋವಂದನ್ ಯೋಜನೆ ಕುರಿತು ಸ್ಪಷ್ಟತೆ ಕೋರಿ ಪ್ರಧಾನಮಂತ್ರಿ ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದ ಅವರು, ಆರೋಗ್ಯ ಇಲಾಖೆಯಲ್ಲಿ 1,000 ಹುದ್ದೆಗಳ ನೇಮಕಾತಿಗೆ ಅನುಮೋದನೆ ದೊರೆತಿದ್ದು, ಇನ್ನೂ 3,500 ಹುದ್ದೆಗಳ ಭರ್ತಿಗೂ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ 20 ನಿಮಿಷ ಹಾಗೂ ನಗರ ಪ್ರದೇಶದಲ್ಲಿ 15 ನಿಮಿಷದೊಳಗೆ ತುರ್ತು ವೈದ್ಯಕೀಯ ಸೇವೆ ಒದಗಿಸುವ ಗುರಿಯೊಂದಿಗೆ 100 ಬೈಕ್ ಆಂಬುಲೆನ್ಸ್ ಹಾಗೂ 450 ಹೊಸ 108 ಆಂಬುಲೆನ್ಸ್ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ತಡವಾದರೆ ಸಂಬಂಧಿತ ಆಂಬುಲೆನ್ಸ್ ಸೇವೆಗೆ ದಂಡ ವಿಧಿಸಲಾಗುವುದು ಎಂದರು.

ಇದೇ ವೇಳೆ, ಆಯುಷ್ಮಾನ್ ಕರ್ನಾಟಕ ಯೋಜನೆಯನ್ನು ಎಪಿಎಲ್ ಕಾರ್ಡುದಾರರಿಗೂ ವಿಸ್ತರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಖಾದರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕಣಚೂರು ಮೋನು, ನೂರುದ್ದೀನ್ ಸಾಲ್ಮರ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!