ಮಂಗಳೂರು : ಆಟಿಸಂ ಹಾಗೂ ನಿರ್ದಿಷ್ಟ ಕಲಿಕಾ ಸಮಸ್ಯೆ ಹೊಂದಿರುವ ಮಕ್ಕಳ ಸಮಗ್ರ ಶಿಕ್ಷಣ ಮತ್ತು ಪುನರ್ವಸತಿಗೆ ನೆರವಾಗುವ ಉದ್ದೇಶದಿಂದ ಶಕ್ತಿನಗರದ ಸಾನಿಧ್ಯ ಸಂಸ್ಥೆಯಲ್ಲಿ ‘ಅರ್ಜುನ್ ಶೆಟ್ಟಿ ಸ್ಮರಣಾರ್ಥ ಶಾಲೆ’ ಇಂದು ಲೋಕಾರ್ಪಣೆ ಗೊಂಡಿತ್ತು .

ಅರ್ಜುನ್ ಶೆಟ್ಟಿ ಫೌಂಡೇಶನ್‌ನ ಸ್ಥಾಪಕ ಸಿಎ ಸುಧೀರ್ ಶೆಟ್ಟಿ ಅವರ ಪುತ್ರ ಅರ್ಜುನ್ ಶೆಟ್ಟಿ ಅವರ ಸ್ಮರಣಾರ್ಥ ಆರಂಭಿಸಲಾದ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ವಿವಿಧ ಥೆರಪಿಗಳೊಂದಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮುಕ್ತ ಶಾಲೆಗಳ ಸಹಯೋಗದಲ್ಲಿ ಪದವಿ ಪೂರ್ವ ಶಿಕ್ಷಣದವರೆಗೆ ಕಲಿಕಾ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಶಾಲೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಸಂಸದರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಅರ್ಜುನ್ ಶೆಟ್ಟಿ ಫೌಂಡೇಶನ್‌ನ ಸ್ಥಾಪಕ ಸಿಎ ಸುಧೀರ್ ಶೆಟ್ಟಿ, ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ, ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಮಾರ್ಲ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷ ಶಾಲೆಗಳಿಗೆ ಸರ್ಕಾರ ಅನುದಾನ ಹೆಚ್ಚಿಸಿದ್ದರೂ ಕಳೆದ ನಾಲ್ಕು ತಿಂಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಕಡಿಮೆ ವೇತನದ ಹಿನ್ನೆಲೆಯಲ್ಲಿ ವಸತಿ ವಿಶೇಷ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಉಳಿಸಿಕೊಳ್ಳುವುದು ಸವಾಲಾಗಿದೆ ಎಂದು ಅವರು ಹೇಳಿದರು.

