ಉಳ್ಳಾಲ: ಆ.9 ರಂದು ಮೀನುಗಾರಿಗೆಕೆ ದೋಣಿಯಲ್ಲಿ ತೆರಳುವ ಸಂದರ್ಭ ದೊಡ್ಡ ಗಾತ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದ ಕುಂದಾಪುರ ಮೂಲದ ನಾರಾಯಣ(31) ಮೃತದೇಹ ಉಳ್ಳಾಲದ ಕೋಟೆಪುರ ಅಳಿವೆಬಾಗಿಲಿನಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಉಳ್ಳಾಲ ಮೂಲದ ಓಷಿಯನ್ ಸ್ಟಾರ್ ಹೆಸರಿನ ಬೋಟ್ ಮಂಗಳೂರಿನ ಧಕ್ಕೆಯಿಂದ ಮೀನುಗಾರಿಕೆಗೆ ತೆರಳುವ ಸಂದರ್ಭ ದೊಡ್ಡ ಗಾತ್ರದ ಅಲೆ ದೋಣಿಗೆ ಬಡಿದು ಕುಂದಾಪುರ ನಿವಾಸಿ ನಾರಾಯಣ (31) ಎಂಬವರು ನಾಪತ್ತೆಯಾಗಿದ್ದರು. ಹೊಸತಾಗಿ ಬೋಟಿಗೆ ಬಂದಿದ್ದ ಅವರು ಸಮುದ್ರದ ಅಲೆಗಳ ನಡುವೆ ಸಿಲುಕಿ ನಾಪತ್ತೆಯಾಗಿದ್ದರು.

ಈ ಕುರಿತು ಕಳೆದ 8 ದಿನಗಳಿಂದ ಬೋಟ್ ಮಾಲೀಕರು ಸೇರಿದಂತೆ, ಮನೆಮಂದಿ ಹುಡುಕಾಡುತ್ತಲೇ ಇದ್ದರು. ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು. ಇದೀಗ ಉಳ್ಳಾಲದ ಕೋಟೆಪುರ ಅಳಿವೆಬಾಗಿಲು ಸಮೀಪ ಪತ್ತೆಯಾದ ಮೃತದೇಹ ಅವರದ್ದೇ ಅನ್ನುವುದನ್ನು ಸಹೋದರರು ಗುರುತು ಪತ್ತೆ ಹಚ್ಚಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ.


