ಮಂಗಳೂರು: ಲೋಕಕಲ್ಯಾಣ, ಧರ್ಮಸಂವರ್ಧನೆ, ಶಾಂತಿ, ಸಮೃದ್ಧಿ ಹಾಗೂ ಸರ್ವಜನ ಕ್ಷೇಮದ ಸಂಕಲ್ಪದೊಂದಿಗೆ ಜಗದಾಚಾರ್ಯ ಸ್ವಾಮಿ ಅಖಿಲೇಶ್‌ಜೀ ಮಹಾರಾಜ್ ಸೇವಾ ಸಂಸ್ಥಾನ ಹಾಗೂ ದಿ ಸ್ಯಾಫ್ರನ್ ಫ್ರಂಟ್ ಸಹಯೋಗದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ ಆಯೋಜಿಸಲಾಗಿದೆ.
ಆಗಸ್ಟ್ 24ರಿಂದ 28ರವರೆಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಮಹಾಯಾಗ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಮಹಾಯಾಗವನ್ನು ಆಯೋಜಿಸಲಾಗುತ್ತಿದೆ ಎಂದು ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಚಾರ್ಯ ಶ್ರೀ ಲವಕುಶ್ ಮಿಶ್ರಾಜೀ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಮಹಾಯಾಗ ನೆರವೇರಲಿದೆ ಎಂದರು.
ಶ್ರೀ ಮಹಾಲಕ್ಷ್ಮೀ ಸಮೃದ್ಧಿಯ ಪ್ರತೀಕವಾಗಿದ್ದು, ಶ್ರೀಮನ್ನಾರಾಯಣ ಧರ್ಮ ಸಂರಕ್ಷಣೆ ಹಾಗೂ ಲೋಕಕಲ್ಯಾಣದ ದೈವಿಕ ಸ್ವರೂಪವಾಗಿದ್ದಾರೆ. ಜಾತಿ-ಭೇದವಿಲ್ಲದೆ ಎಲ್ಲ ವರ್ಗ ಹಾಗೂ ವರ್ಣಗಳ ಜನರು ಒಗ್ಗೂಡಿ ಯಾಗದಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಕುಟುಂಬಗಳಲ್ಲಿ ಶಾಂತಿ, ಸೌಹಾರ್ದ, ಆರೋಗ್ಯ, ಸದ್ಭಾವನೆ ಹಾಗೂ ಸಮೃದ್ಧಿ ನೆಲೆಸುವುದರೊಂದಿಗೆ ಸಮಾಜದಲ್ಲಿ ಧಾರ್ಮಿಕ ಮತ್ತು ಸಾತ್ವಿಕ ವಾತಾವರಣ ನಿರ್ಮಾಣವಾಗಲಿ ಎಂಬುದು ಮಹಾಯಾಗದ ಉದ್ದೇಶವಾಗಿದೆ ಎಂದು ತಿಳಿಸಿದರು.

ಯಾಗದ ವಿಶೇಷತೆಯಾಗಿ ಜಾತಿ-ಮತ, ಶ್ರೇಷ್ಠ-ಕನಿಷ್ಠ ಎಂಬ ಯಾವುದೇ ತಾರತಮ್ಯವಿಲ್ಲದೆ ಆಚಾರ್ಯರಿಂದ ದೀಕ್ಷೆ ಪಡೆದು, ಯಜ್ಞೋಪವೀತ ಹಾಗೂ ವಸ್ತ್ರಗಳನ್ನು ಧರಿಸಿ ಭಕ್ತರು ಮಹಾಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ. ತ್ಯಾಗ, ಸಮರ್ಪಣೆ, ಶುದ್ಧತೆ ಹಾಗೂ ಲೋಕಕಲ್ಯಾಣವೇ ಯಜ್ಞ ಪರಂಪರೆಯ ಪ್ರಮುಖ ಆಶಯಗಳಾಗಿದ್ದು, ಇಂದಿನ ಪೀಳಿಗೆಗೆ ವೈದಿಕ ಸಂಸ್ಕೃತಿ ಮತ್ತು ಯಜ್ಞ ಪರಂಪರೆಯ ಮಹತ್ವವನ್ನು ಪರಿಚಯಿಸುವ ಉದ್ದೇಶವೂ ಈ ಮಹಾಯಾಗಕ್ಕಿದೆ ಎಂದರು.

ಆಗಸ್ಟ್ 24ರಂದು ಕಳಶಯಾತ್ರೆ
ಮಹಾಯಾಗದ ಆರಂಭದ ಅಂಗವಾಗಿ ಆಗಸ್ಟ್ 24ರಂದು ಬೆಳಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀ ಯೋಗೇಶ್ವರ ಕದ್ರಿ ಮಠದವರೆಗೆ ಕಳಶಯಾತ್ರೆ ನಡೆಯಲಿದೆ. ಬಳಿಕ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳು ಜರುಗಲಿವೆ.
ಮಹಾಯಾಗದ ಸಂದರ್ಭದಲ್ಲಿ ಹೋಮ-ಹವನ, ಮಂತ್ರಪಠಣ, ಪೂಜಾ ವಿಧಿವಿಧಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಆಗಸ್ಟ್ 28ರಂದು ಪೂರ್ಣಾಹುತಿ ನೆರವೇರಲಿದೆ.

ಭಕ್ತರು ಕುಟುಂಬ ಸಮೇತರಾಗಿ ಮಹಾಯಾಗದಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮೀನಾರಾಯಣರ ಅನುಗ್ರಹ ಹಾಗೂ ಪೂಜ್ಯ ಗುರುಗಳ ಆಶೀರ್ವಾದ ಪಡೆದು ಈ ಪುಣ್ಯಕಾರ್ಯವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕಾರ್ಯಾಧ್ಯಕ್ಷ ರಾಘವೇಂದ್ರ ರಾವ್, ಪ್ರಧಾನ ಸಂಚಾಲಕ ರಾಜೇಶ್ ಪವಿತ್ರನ್ , ಸಂಘಟನಾ ಕಾರ್ಯದರ್ಶಿ ಎಲ್.ಕೆ. ಸುವರ್ಣ ಹಾಗೂ ಪ್ರಮುಖರಾದ ಜನಾರ್ಧನ ಮತ್ತು ಕಮಲೇಶ ಸುವರ್ಣ ಉಪಸ್ಥಿತರಿದ್ದರು.


