ಮಂಗಳೂರು: ಇ-ರಿಕ್ಷಾ ಚಾಲಕರು ಎದುರಿಸುತ್ತಿರುವ ಪರ್ಮಿಟ್ ಗೊಂದಲ, ವಲಯ ನಿಯಮ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಲು ಚಾಲಕರ ಸಂಘಟನೆ ನಿರ್ಧರಿಸಿದೆ ಎಂದು ಟೀಮ್ ಗ್ರೀನ್ ಸಿಟಿಯ ಮಾಜಿ ಅಧ್ಯಕ್ಷ ಪ್ರಜೇಶ್ ತಿಳಿಸಿದ್ದಾರೆ.
ಪರ್ಮಿಟ್ ವಿಚಾರದಲ್ಲಿ ಚಾಲಕರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬುದು ಪ್ರಮುಖ ಆರೋಪವಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಅಗತ್ಯ ನಿಯಮಗಳು ಹಾಗೂ ದಾಖಲೆಗಳನ್ನು ಪೂರ್ಣಗೊಳಿಸಿದ್ದರೂ, ಸುಮಾರು ಶೇ.99ರಷ್ಟು ಚಾಲಕರಿಗೆ ಗ್ರಾಮಾಂತರ ಪರ್ಮಿಟ್ ನೀಡಲಾಗುತ್ತಿದೆ. ಕೆಲವೇ ಚಾಲಕರಿಗೆ ಮಾತ್ರ ನಗರ ಪರ್ಮಿಟ್ ನೀಡಲಾಗುತ್ತಿದ್ದು, ಇದರಿಂದ ಚಾಲಕರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಪ್ರಜೇಶ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಇ-ರಿಕ್ಷಾಗಳಿಗೆ ವಲಯವಾರು ಸಂಚಾರ ನಿಯಮ ಜಾರಿಗೊಳಿಸಿರುವುದಕ್ಕೂ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ನಿಯಮ ಬೇರೆಡೆ ಇಲ್ಲದಿದ್ದರೂ ಮಂಗಳೂರಿನಲ್ಲಿ ಮಾತ್ರ ಜಾರಿಗೊಳಿಸಿರುವುದರಿಂದ ಚಾಲಕರು ಪದೇಪದೆ ನ್ಯಾಯಾಲಯ ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ, ಪರ್ಮಿಟ್‌ಗಳ ಮೇಲೆ ಷರತ್ತುಬದ್ಧ ಮುದ್ರೆ ಹಾಕುತ್ತಿರುವ ಕ್ರಮವೂ ಚಾಲಕರಲ್ಲಿ ಆತಂಕ ಮೂಡಿಸಿದೆ. ಪರ್ಮಿಟ್ ಪಡೆದಿದ್ದರೂ ಮುಂದಿನ ದಿನಗಳಲ್ಲಿ ತಮ್ಮ ಸಂಚಾರಕ್ಕೆ ಯಾವುದೇ ನಿರ್ಬಂಧ ಎದುರಾಗಬಹುದೇ ಎಂಬ ಅಭದ್ರತೆ ಚಾಲಕರನ್ನು ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇ-ರಿಕ್ಷಾಗಳ ಆದಾಯ ಮತ್ತು ಬ್ಯಾಟರಿ ಸಾಮರ್ಥ್ಯವೂ ಚಾಲಕರಿಗೆ ಪ್ರಮುಖ ಸಮಸ್ಯೆಯಾಗಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ ಬಳಿಕ ಇ-ರಿಕ್ಷಾ ಸರಾಸರಿ 150 ಕಿ.ಮೀ.ವರೆಗೆ ಸಂಚರಿಸಬಹುದಾಗಿದೆ. ಆದರೆ ನಗರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಹಾಗೂ ವಿವಿಧ ರೀತಿಯ ತೊಂದರೆಗಳಿಂದಾಗಿ ಚಾಲಕರು ವಾಹನವನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಲು ಸಾಧ್ಯವಾಗದೆ, ನಿರಂತರವಾಗಿ ಸಂಚಾರದಲ್ಲೇ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಜೇಶ್ ಹೇಳಿದ್ದಾರೆ.
ಈ ನಡುವೆ, ಈಗಾಗಲೇ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮುನ್ನವೇ ಮತ್ತಷ್ಟು 200 ಹೊಸ ಇ-ರಿಕ್ಷಾ ಪರ್ಮಿಟ್‌ಗಳನ್ನು ನೀಡಲು ಮುಂದಾಗಿರುವುದಕ್ಕೂ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಇ-ರಿಕ್ಷಾಗಳ ಸಂಖ್ಯೆ ಹೆಚ್ಚಾದರೆ ಈಗಾಗಲೇ ಸಂಕಷ್ಟದಲ್ಲಿರುವ ಚಾಲಕರ ಜೀವನೋಪಾಯದ ಮೇಲೆ ಮತ್ತಷ್ಟು ಪರಿಣಾಮ ಬೀರುವುದರ ಜೊತೆಗೆ ಸಂಚಾರ ವ್ಯವಸ್ಥೆಯ ಮೇಲೂ ಒತ್ತಡ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳ ಬದಲಾವಣೆಯೊಂದಿಗೆ ಪರ್ಮಿಟ್ ನಿಯಮಗಳಲ್ಲೂ ಬದಲಾವಣೆ ಆಗಿರುವುದು ಚಾಲಕರಿಗೆ ಗೊಂದಲ ಉಂಟುಮಾಡಿದೆ ಎಂದು ಪ್ರಜೇಶ್ ತಿಳಿಸಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅವಧಿಯಲ್ಲಿ ಇ-ರಿಕ್ಷಾಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶವಿತ್ತು. ಆದರೆ ಬಳಿಕ ಅಧಿಕಾರಿಗಳ ಬದಲಾವಣೆಯೊಂದಿಗೆ ನಿಯಮಗಳಲ್ಲಿ ಬದಲಾವಣೆ ಆಗಿದ್ದು, ಇದರಿಂದ ಚಾಲಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ
ಚಾಲಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ ಹೋರಾಟ ಮುಂದುವರಿಸಲು ಇ-ರಿಕ್ಷಾ ಚಾಲಕರ ಸಂಘಟನೆ ನಿರ್ಧರಿಸಿದೆ. ಆರ್‌ಟಿಒ ಕಚೇರಿ ಎದುರು ಶಾಂತಿ ಕದಡುವ ಯಾವುದೇ ಉಗ್ರ ಪ್ರತಿಭಟನೆ ನಡೆಸದೆ, ಅನ್ನ-ನೀರು ತ್ಯಜಿಸಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಜೇಶ್ ತಿಳಿಸಿದ್ದಾರೆ.
ಪರ್ಮಿಟ್ ಸಮಸ್ಯೆ, ವಲಯ ನಿಯಮ, ಪಾರ್ಕಿಂಗ್ ವ್ಯವಸ್ಥೆ, ಹೊಸ ಪರ್ಮಿಟ್‌ಗಳ ವಿತರಣೆ ಸೇರಿದಂತೆ ಚಾಲಕರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

