ಮಂಗಳೂರು, ಆ. 22:* ಪಾರ್ಶ್ವವಾಯು (ಸ್ಟ್ರೋಕ್) ಇದೀಗ ವಯಸ್ಸಾದವರಿಗಷ್ಟೇ ಸೀಮಿತವಾಗಿಲ್ಲ. 30ರಿಂದ 50 ವರ್ಷದೊಳಗಿನ ಯುವ ವಯಸ್ಕರಲ್ಲೂ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕೆಎಂಸಿ ಆಸ್ಪತ್ರೆ ಮಂಗಳೂರಿನ ತಜ್ಞರು ಎಚ್ಚರಿಸಿದ್ದಾರೆ.

ಕೆಎಂಸಿ ಆಸ್ಪತ್ರೆ ಮಂಗಳೂರಿನ ಸಮಗ್ರ ಸ್ಟ್ರೋಕ್ ಸಿದ್ಧತಾ ಘಟಕದ ವತಿಯಿಂದ ಸ್ಟ್ರೋಕ್ ಆರೈಕೆಯ 30 ಸುವರ್ಣ ವರ್ಷಗಳ ಅಂಗವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಇಂಟರ್ವೆನ್ಷನಲ್ ನ್ಯೂರೋರೇಡಿಯಾಲಜಿ, ಕ್ರಿಟಿಕಲ್ ಕೇರ್, ತುರ್ತು ವೈದ್ಯಕೀಯ ಹಾಗೂ ಪುನರ್ವಸತಿ ತಜ್ಞರು ಭಾಗವಹಿಸಿ, ಸ್ಟ್ರೋಕ್ನ ಆರಂಭಿಕ ಲಕ್ಷಣಗಳನ್ನು ಗುರುತಿಸಿ ತಕ್ಷಣ ಚಿಕಿತ್ಸೆ ಪಡೆಯುವ ಮಹತ್ವವನ್ನು ವಿವರಿಸಿದರು.
ಕಳೆದ ಮೂರು ದಶಕಗಳಲ್ಲಿ ಕೆಎಂಸಿ ಆಸ್ಪತ್ರೆಯ ತಂಡವು 25 ಸಾವಿರಕ್ಕೂ ಅಧಿಕ ಸ್ಟ್ರೋಕ್ ಪ್ರಕರಣಗಳಿಗೆ ಚಿಕಿತ್ಸೆ ನೀಡಿದ್ದು, ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಇಂಟರ್ವೆನ್ಷನಲ್ ರೇಡಿಯಾಲಜಿ, ಐಸಿಯು, ತುರ್ತು ವೈದ್ಯಕೀಯ ಹಾಗೂ ನ್ಯೂರೋ-ರಿಹ್ಯಾಬಿಲಿಟೇಶನ್ ಸೇವೆಗಳ ಮೂಲಕ 24×7 ಸಮಗ್ರ ಆರೈಕೆ ಒದಗಿಸುತ್ತಿದೆ.

ಕೆಎಂಸಿ ಆಸ್ಪತ್ರೆ ಮಂಗಳೂರು ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, “ಪಾರ್ಶ್ವವಾಯು ಈಗ ವಯಸ್ಸಾದವರಿಗಷ್ಟೇ ಸೀಮಿತವಾಗಿಲ್ಲ. ಯುವ ವಯಸ್ಕರಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ಆರಂಭಿಕ ಲಕ್ಷಣಗಳನ್ನು ಗುರುತಿಸಿ, ಸುವರ್ಣ ಅವಧಿಯೊಳಗೆ ಸ್ಟ್ರೋಕ್ ಸಿದ್ಧತಾ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವುದು ಅತ್ಯಂತ ಮುಖ್ಯ,” ಎಂದರು.
ನರವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಕನ್ಸಲ್ಟೆಂಟ್ ಡಾ. ಝಡ್.ಕೆ. ಮಿಸ್ರಿ ಮಾತನಾಡಿ, 30–50 ವರ್ಷದವರಲ್ಲಿ ಸ್ಟ್ರೋಕ್ ಪ್ರಕರಣಗಳ ಏರಿಕೆ ಕಂಡುಬರುತ್ತಿದ್ದು, ಒತ್ತಡ, ಜಡ ಜೀವನಶೈಲಿ ಹಾಗೂ ಕಡಿಮೆ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವ ಅಧಿಕ ರಕ್ತದೊತ್ತಡ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದರು.

ನರವಿಜ್ಞಾನ ಕನ್ಸಲ್ಟೆಂಟ್ ಡಾ. ಶಿವಾನಂದ ಪೈ ಅವರು, ಸ್ಟ್ರೋಕ್ನ ಲಕ್ಷಣಗಳನ್ನು ಗುರುತಿಸಲು B.E.F.A.S.T. ಸೂಚನೆಗಳನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದರು. ಸಮತೋಲನ ಕಳೆದುಕೊಳ್ಳುವುದು, ದೃಷ್ಟಿಯಲ್ಲಿ ಹಠಾತ್ ಬದಲಾವಣೆ, ಮುಖದ ಒಂದು ಭಾಗ ಬಾಗುವುದು, ಕೈಯಲ್ಲಿ ದೌರ್ಬಲ್ಯ ಹಾಗೂ ಮಾತು ತೊದಲುವುದು ಪ್ರಮುಖ ಲಕ್ಷಣಗಳಾಗಿದ್ದು, ಯಾವುದೇ ಹಠಾತ್ ನರಸಂಬಂಧಿ ಲಕ್ಷಣವನ್ನು ತುರ್ತು ಪರಿಸ್ಥಿತಿಯೆಂದು ಪರಿಗಣಿಸಬೇಕು ಎಂದು ಹೇಳಿದರು.
ಕನ್ಸಲ್ಟೆಂಟ್ ನರವಿಜ್ಞಾನ ತಜ್ಞ ಡಾ. ರೋಹಿತ್ ಪೈ ಮಾತನಾಡಿ, ಇಸ್ಕೀಮಿಕ್ ಸ್ಟ್ರೋಕ್ನಲ್ಲಿ 4.5 ಗಂಟೆಗಳೊಳಗೆ ಇಂಟ್ರಾವೀನಸ್ ಥ್ರಾಂಬೊಲಿಸಿಸ್ ನೀಡುವುದು ಮಹತ್ವದ್ದಾಗಿದೆ. ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಹಾಗೂ ಜೀವನಶೈಲಿಯನ್ನು ನಿಯಂತ್ರಿಸುವ ಮೂಲಕ ಮರುಪಾರ್ಶ್ವವಾಯುವನ್ನು ತಡೆಯಬಹುದು ಎಂದು ತಿಳಿಸಿದರು.

ಇಂಟರ್ವೆನ್ಷನಲ್ ನ್ಯೂರೋರೇಡಿಯಾಲಜಿ ಕನ್ಸಲ್ಟೆಂಟ್ ಡಾ. ಕೀರ್ತಿರಾಜ್ ಬಿ. ಅವರು, ಆಯ್ದ ಅಗತ್ಯ ಪ್ರಕರಣಗಳಲ್ಲಿ ಮೆಕ್ಯಾನಿಕಲ್ ಥ್ರಾಂಬೆಕ್ಟಮಿ ಮೂಲಕ ರಕ್ತನಾಳದಲ್ಲಿರುವ ದೊಡ್ಡ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಬಹುದು. ಇದರಿಂದ ಕೆಲವು ರೋಗಿಗಳಿಗೆ 24 ಗಂಟೆಗಳವರೆಗಿನ ವಿಸ್ತೃತ ಚಿಕಿತ್ಸಾ ಅವಕಾಶ ದೊರೆಯುತ್ತದೆ ಎಂದರು.
ನ್ಯೂರೋಸರ್ಜರಿ ಕನ್ಸಲ್ಟೆಂಟ್ ಡಾ. ಮಯೂರ್ ಕಾಮತ್ ಅವರು, ತೀವ್ರ ಸ್ಟ್ರೋಕ್ನಿಂದ ಮೆದುಳಿನಲ್ಲಿ ಊತ ಅಥವಾ ರಕ್ತಸ್ರಾವ ಉಂಟಾದಾಗ ತ್ವರಿತ ಶಸ್ತ್ರಚಿಕಿತ್ಸೆ ಜೀವ ಉಳಿಸುವಲ್ಲಿ ನಿರ್ಣಾಯಕವಾಗಬಹುದು ಎಂದು ಹೇಳಿದರು.
ತುರ್ತು ವೈದ್ಯಕೀಯ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಮಾತನಾಡಿ, ಕುಂದಾಪುರ, ಸುರತ್ಕಲ್, ಪುತ್ತೂರು, ಕಕ್ಕಿಂಜೆ ಹಾಗೂ ಚೇರುವತ್ತೂರು ಸೇರಿದಂತೆ ಐದು ತುರ್ತು ಕೇಂದ್ರಗಳು ಪ್ರಾಥಮಿಕ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆರು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ಗಳ ಮೂಲಕ ರೋಗಿಗಳಿಗೆ ತ್ವರಿತ ಚಿಕಿತ್ಸೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಕ್ರಿಟಿಕಲ್ ಕೇರ್ ಕನ್ಸಲ್ಟೆಂಟ್ ಡಾ. ಜಯೇಶ್ ಕಾಮತ್ ಅವರು, ಸ್ಟ್ರೋಕ್ ನಂತರ ನ್ಯೂರೋ-ಐಸಿಯು ಮೇಲ್ವಿಚಾರಣೆ, ಮೆದುಳಿನ ಊತ ನಿಯಂತ್ರಣ ಹಾಗೂ ದೇಹದ ಪ್ರಮುಖ ಕಾರ್ಯಗಳ ಸ್ಥಿರೀಕರಣ ಅತ್ಯಗತ್ಯ ಎಂದು ತಿಳಿಸಿದರು.

ಫಿಸಿಯೋಥೆರಪಿ ವಿಭಾಗದ ಪ್ರಾಧ್ಯಾಪಕ ಡಾ. ಅಬ್ರಹಾಂ ಜೋಶುವಾ ಮಾತನಾಡಿ, ರೋಗಿಯ ಸ್ಥಿತಿ ಸ್ಥಿರವಾದ ಬಳಿಕ 24–48 ಗಂಟೆಗಳೊಳಗೆ ಸೂಕ್ತ ನ್ಯೂರೋ-ರಿಹ್ಯಾಬಿಲಿಟೇಶನ್ ಆರಂಭಿಸುವುದು ಚೇತರಿಕೆಗೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಬಳಿಕ ಸ್ವಯಂಸೇವಕರಿಗಾಗಿ ಪ್ರಥಮ ಪ್ರತಿಕ್ರಿಯೆದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸ್ಟ್ರೋಕ್ನ ಲಕ್ಷಣಗಳು, ತಪ್ಪು ಕಲ್ಪನೆಗಳು ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲಾಯಿತು.

