ಓಣಂ ಹಬ್ಬವು ಕೇವಲ ಕೇರಳಕ್ಕೆ ಸೀಮಿತವಾಗಿರದೆ, ದೇಶದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ಕೇರಳೀಯರು ಕೂಡ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಬ್ಬವು ಸಮಾಜವನ್ನು ಒಗ್ಗೂಡಿಸುವ ಹಾಗೂ ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುವ ಮಹತ್ವದ ಹಬ್ಬವಾಗಿ ಪರಿವರ್ತನೆಯಾಗಿದೆ.

ಓಣಂ ಹಬ್ಬದ ಪ್ರಮುಖ ಉದ್ದೇಶಗಳಲ್ಲಿ ರೈತರನ್ನು ಗೌರವಿಸುವುದು, ಕುಟುಂಬದ ಸದಸ್ಯರು ಹಾಗೂ ಸಮಾಜದ ವಿವಿಧ ವರ್ಗಗಳ ಜನರು ಒಗ್ಗೂಡಿ ಸಂಭ್ರಮಿಸುವುದು ಪ್ರಮುಖವಾಗಿದೆ. ಈ ಹಬ್ಬದ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆ ಹಾಗೂ ಸಾಮಾಜಿಕ ಸೌಹಾರ್ದತೆಯ ಮಹತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಅವರು ಹೇಳಿದರು.

ಅಡ್ಯಾರ್ನ ಸೈಂಟ್ ಲೂರ್ಡ್ಸ್ ಕಾಲೇಜ್ ಆಫ್ ನರ್ಸಿಂಗ್ನಲ್ಲಿ ನಡೆದ “ತೈತಕ-2026” ಓಣಂ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓಣಂ ಹಬ್ಬವು ರೈತರು, ಕುಟುಂಬದ ಸದಸ್ಯರು ಹಾಗೂ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಉತ್ತಮ ಅವಕಾಶವಾಗಿದೆ. ಈ ಹಬ್ಬದ ಆಶಯಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವತ್ತ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸೈಂಟ್ ಲೂರ್ಡ್ಸ್ ಕಾಲೇಜ್ ಆಫ್ ನರ್ಸಿಂಗ್ನ ಆಡಳಿತಾಧಿಕಾರಿ ಮಾರ್ಷಲ್ ಮೊಂಟೇರಿಯೊ ಅವರು ಮಾತನಾಡಿ, ಓಣಂ ಹಬ್ಬದ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗಗಳಲ್ಲಿಯೂ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆ ಮತ್ತಷ್ಟು ವೃದ್ಧಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿ ಕ್ರಿಸ್ನಿ ಡಿ’ಸಿಲ್ವಾ ಅವರು ಸ್ವಾಗತ ಕೋರಿದರು. ವಿದ್ಯಾರ್ಥಿನಿ ಪ್ರಿಜಿತಾ ಡಿ’ಸೋಜಾ ಅವರು ವಂದನಾರ್ಪಣೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅಭಿಜಿತ್ ಹಾಗೂ ಮ್ಯಾನೇಜರ್ ಹಬೀಬುಲ್ಲಾ ಕಣ್ಣೂರು ಉಪಸ್ಥಿತರಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಓಣಂ ಪ್ರಯುಕ್ತ ಸಹಭೋಜನವನ್ನೂ ಆಯೋಜಿಸಲಾಗಿತ್ತು.

