ಮಂಜೇಶ್ವರ: 64 ವರ್ಷದ ವೃದ್ಧ ವ್ಯಾಪಾರಿಯನ್ನು ಮನೆಗೆ ಕರೆಸಿಕೊಂಡು ಬೆದರಿಸಿ, ಹಣ ಹಾಗೂ ಮೊಬೈಲ್ ಫೋನ್ಗಳನ್ನು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿದಂತೆ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಕುಬನ್ನೂರಿನ ಹಸನ್ ಆಸಿಫ್ (33), ಈತನ ಪತ್ನಿ ರಿಜ್ವಾನ (28) ಮತ್ತು ಇವರ ಸಂಬಂಧಿ ಮೊಹಮ್ಮದ್ ಸಿರಾಜ್ (35) ಬಂಧಿತ ಆರೋಪಿಗಳು.
ಕುಂಬಳ ಪೊಲೀಸ್ ಉಪನಿರೀಕ್ಷಕ ಎಸ್. ಅನೂಪ್ ಅವರ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಈ ತಿಂಗಳ 14ರಂದು ಆರೋಪಿ ರಿಜ್ವಾನ ತನಗೆ ಪರಿಚಯವಿರುವ 64 ವರ್ಷದ ವೃದ್ಧ ವ್ಯಾಪಾರಿಯೊಬ್ಬರಿಗೆ ಕರೆ ಮಾಡಿ, ತನ್ನ ಮನೆಯ ವಿದ್ಯುತ್ ಬಿಲ್ ಪಾವತಿಸದ ಕಾರಣ ಫ್ಯೂಸ್ ಕಟ್ ಮಾಡಲಾಗಿದೆ ಎಂದೂ, 15,000 ರೂಪಾಯಿ ಸಾಲ ನೀಡಿ ಸಹಾಯ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದರು. ಇವರ ಕಷ್ಟವನ್ನು ಕಂಡು ಕರುಣೆ ತೋರಿಸಿದ ಆ ವ್ಯಾಪಾರಿ 1,500 ರೂಪಾಯಿಗಳನ್ನು ಸಾಲವಾಗಿ ನೀಡಿದ್ದರು.

ಬಳಿಕ 16ರಂದು ರಿಜ್ವಾನ ಆ ವ್ಯಾಪಾರಿಗೆ ಫೋನ್ ಮಾಡಿ, ಸಾಲವಾಗಿ ಪಡೆದ 1,500 ರೂಪಾಯಿಯನ್ನು ನೇರವಾಗಿ ಮನೆಗೆ ಬಂದು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ವ್ಯಾಪಾರಿ ಆಕೆಯ ಮನೆಗೆ ತೆರಳಿ ಸಿಟೌಟ್ನಲ್ಲಿ ಕುಳಿತಿದ್ದಾಗ, ಮನೆಯೊಳಗಿನಿಂದ ಬಂದ ಆಸಿಫ್ ಮತ್ತು ಸಿರಾಜ್ ಅವರನ್ನು ಬಲವಂತವಾಗಿ ಒಳಗೆ ಎಳೆದುಕೊಂಡು ಹೋಗಿ ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ.
ವ್ಯಾಪಾರಿಯ ಜೇಬಿನಲ್ಲಿದ್ದ 1,500 ರೂಪಾಯಿ ಹಾಗೂ ಅವರ ಬಳಿಯಿದ್ದ ಸಣ್ಣ ಮೊಬೈಲ್ ಫೋನ್ ಅನ್ನು ಆರೋಪಿಗಳು ಕಿತ್ತುಕೊಂಡಿದ್ದಾರೆ. ಈ ವೇಳೆ ರಿಜ್ವಾನ ಆ ವ್ಯಾಪಾರಿಯ ವಿವಿಧ ಫೋಟೋಗಳು ಮತ್ತು ವೀಡಿಯೊಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ನಂತರ ಅವರ ಕಾರಿನ ಕೀಯನ್ನು ಬಲವಂತವಾಗಿ ಪಡೆದು, ಕಾರಿನೊಳಗೆ ಇದ್ದ 25,000 ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಮೊಬೈಲ್ ಫೋನ್ ಹಾಗೂ ಎರಡು ಎಟಿಎಂ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಎಟಿಎಂ ಕಾರ್ಡ್ಗಳ ಪಿನ್ ನಂಬರ್ ಬಲವಂತವಾಗಿ ಪಡೆದು, ಒಂದು ಕಾರ್ಡ್ನಿಂದ 5,000 ರೂಪಾಯಿ ಹಾಗೂ ಮತ್ತೊಂದು ಕಾರ್ಡ್ನಿಂದ 1,200 ರೂಪಾಯಿಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಕೊನೆಯಲ್ಲಿ ಎರಡು ಲಕ್ಷ ರೂಪಾಯಿ ಹಣ ನೀಡದಿದ್ದರೆ ಆ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ವ್ಯಾಪಾರಿಯನ್ನು ಕಳುಹಿಸಿದ್ದಾರೆ. ಅಲ್ಲದೆ, 17ರಂದು ಆರೋಪಿಗಳು ವ್ಯಾಪಾರಿಯ ಅಂಗಡಿಗೆ ತೆರಳಿ ಮತ್ತೆ ಬೆದರಿಕೆ ಹಾಕಿದ್ದರು.

ಈ ಕುರಿತು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

