ನಿಸರ್ಗ ಗೌರವ ಪುರಸ್ಕಾರಕ್ಕೆ ಪ್ರೊ. ಬಿ.ಎ. ವಿವೇಕ ರೈ ಆಯ್ಕೆ

ಮಂಗಳೂರು: ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಬಿ. ದಾಮೋದರ ನಿಸರ್ಗ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ದಾಮೋದರ ನಿಸರ್ಗ ತುಳು ಪ್ರತಿಷ್ಠಾನ ವತಿಯಿಂದ ನೀಡಲಾಗುವ 2026ನೇ ಸಾಲಿನ ನಿಸರ್ಗ ಗೌರವ ಪುರಸ್ಕಾರಕ್ಕೆ ತುಳು ಸಾಹಿತ್ಯದ ಹಿರಿಯ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಕುರಿತು ಪತ್ರಿಕಾಭವನದಲ್ಲಿ ಮಾಹಿತಿ ನೀಡಿದ ಪ್ರಶಸ್ತಿ ಸಮಿತಿ ಸದಸ್ಯ ವರ್ಕಾಡಿ ರವಿ ಅಲೆವೂರಾಯ, ಪುರಸ್ಕಾರ ಪ್ರದಾನ ಸಮಾರಂಭವು ಆಗಸ್ಟ್ 30ರಂದು ಸಂಜೆ 4 ಗಂಟೆಗೆ ಕಂಕನಾಡಿ ಗರೋಡಿಯ ಸರ್ವಮಂಗಳ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಕೆ. ಚಿತ್ತರಂಜನ್ ಸಮಾರಂಭ ಉದ್ಘಾಟಿಸಲಿದ್ದು, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ವರ್ಧಮಾನ್ ದುರ್ಗಾಪ್ರಸಾದ್ ಶೆಟ್ಟಿ ಹಾಗೂ ಎ.ಸಿ. ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಿ. ದಾಮೋದರ ನಿಸರ್ಗ ಅವರು ತುಳು ಸಂಘಟನೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತುಳು ಭಾಷೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದರು. ತಮ್ಮ ತಂದೆ ಬಿ. ದೋಗ್ರ ಪೂಜಾರಿ ಅವರ ಸ್ಮರಣಾರ್ಥ ಯಕ್ಷಗಾನ ಕೇಂದ್ರ ಸ್ಥಾಪಿಸಿ ಯಕ್ಷಗಾನ ಕ್ಷೇತ್ರಕ್ಕೂ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದ ಅವರು, ಸುಮಾರು ನಾಲ್ಕೂವರೆ ದಶಕಗಳ ಕಾಲ ಕುಡ್ಲ ತುಳು ಕೂಟದ ಅಧ್ಯಕ್ಷರಾಗಿದ್ದರು.

ನಿಸರ್ಗರ ಸೇವೆಯನ್ನು ಸ್ಮರಿಸುವ ಹಾಗೂ ತುಳು ಭಾಷೆ-ಸಂಸ್ಕೃತಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸುವ ಉದ್ದೇಶದಿಂದ ಪ್ರತಿಷ್ಠಾನವು ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ರವಿ ಅಲೆವೂರಾಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೇಮಾ ದಾಮೋದರ ನಿಸರ್ಗ, ಡಾ. ಹರಿಕೃಷ್ಣ ಪುನರೂರು, ಡಾ. ವಿನ್ಯಾಸ ನಿಸರ್ಗ, ಡಾ. ಮೇಘ ತ್ರಿದೇವ್ ಹಾಗೂ ಅಶೋಕ ಬಿ.ಎನ್. ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!