ಮಂಗಳೂರು: ಕೇರಳದ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ರೈಲ್ವೆ ವ್ಯವಸ್ಥೆಯನ್ನು ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಸ್ವಾಗತಿಸಿದ್ದಾರೆ.

ನಗರದ ಮನಪಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ರೈಲ್ವೆಯನ್ನು ಕರ್ನಾಟಕದ ವಿಭಾಗಕ್ಕೆ ಸೇರಿಸುವಂತೆ ಹಲವು ವರ್ಷಗಳಿಂದ ವಿವಿಧ ವೇದಿಕೆಗಳಲ್ಲಿ ಒತ್ತಾಯಿಸಲಾಗುತ್ತಿತ್ತು. ಹಿಂದೆ ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿದ್ದ ಸಂದರ್ಭದಲ್ಲೂ ಈ ಬೇಡಿಕೆಯನ್ನು ಮುಂದಿಟ್ಟಿದ್ದೆ. ಇದೀಗ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದರು.

ಮಂಗಳೂರು ಸೇರಿದಂತೆ ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದ್ದು, ರೈಲ್ವೆ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸಲು ಸಹಕಾರಿಯಾಗಲಿದೆ. ಈ ಅವಕಾಶವನ್ನು ಕೈತಪ್ಪಿಸದೆ ಸಂಸದರು, ಶಾಸಕರು ಹಾಗೂ ಕೇಂದ್ರದ ಸಚಿವರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ದಕ್ಷಿಣ ಕನ್ನಡದ ಪ್ರಮುಖ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ ಸಮರ್ಪಕವಾಗಿ ಧ್ವನಿ ಎತ್ತುವ ಅಗತ್ಯವಿದೆ. ಎತ್ತಿನಹೊಳೆ ಯೋಜನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಪರಿಣಾಮಕಾರಿಯಾಗಿ ಚರ್ಚೆ ನಡೆಯಬೇಕು ಎಂದು ಐವನ್ ಡಿ’ಸೋಜಾ ಒತ್ತಾಯಿಸಿದರು.

