ಸೆ.4 ಮತ್ತು 5ರಂದು ಕದ್ರಿಯಲ್ಲಿ ಭವ್ಯ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಉತ್ಸವ

ಮಂಗಳೂರು:ಕದ್ರಿ ಶ್ರೀ ಗೋಪಾಲಕೃಷ್ಣ ಮಠ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನವನ್ನು ಕೇಂದ್ರವಾಗಿಸಿಕೊಂಡು ಸೆಪ್ಟೆಂಬರ್ 4 ಮತ್ತು 5ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಹಾಗೂ ಸಂಪ್ರದಾಯಬದ್ಧ ಮೊಸರುಕುಡಿಕೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಿತಿಯ ಪ್ರಮುಖ ಸುಧಾಕರ್ ರಾವ್ ಪೇಜಾವರ ತಿಳಿಸಿದ್ದಾರೆ.

ಕದ್ರಿ ದೇವಸ್ಥಾನದಿಂದ ಸುಮಾರು ಒಂದರಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಪುರಾತನ ಶ್ರೀ ಗೋಪಾಲಕೃಷ್ಣ ಮಠ ಮತ್ತು ಕದ್ರಿ ದೇವಸ್ಥಾನದ ನಡುವೆ ಪ್ರತಿವರ್ಷ ಭವ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ 4ರಂದು ಅಷ್ಟಮಿ ಅಂಗವಾಗಿ ಕದ್ರಿ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಹಾಗೂ ಗಂಧದ ಪಲ್ಲಕ್ಕಿ ಉತ್ಸವ ನಡೆಯಲಿದೆ. ಬಳಿಕ ದೇವರ ಮೂರ್ತಿಯನ್ನು ಭವ್ಯ ಶೋಭಾಯಾತ್ರೆಯ ಮೂಲಕ ಭಜನೆ, ಮಂಗಳವಾದ್ಯ ಹಾಗೂ ವಿವಿಧ ವಾದ್ಯಘೋಷಗಳೊಂದಿಗೆ ಶ್ರೀ ಗೋಪಾಲಕೃಷ್ಣ ಮಠಕ್ಕೆ ಕರೆತರಲಾಗುವುದು.

ಸೆಪ್ಟೆಂಬರ್ 5ರಂದು ಸಂಜೆ ಸಂಪ್ರದಾಯಬದ್ಧ ವಿಠಲನ ಪಿಂಡಿ ಹಾಗೂ ಮೊಸರುಕುಡಿಕೆ ಉತ್ಸವ ನಡೆಯಲಿದೆ. ಕದ್ರಿ ಶ್ರೀ ಗೋಪಾಲಕೃಷ್ಣ ಮಠದಿಂದ ಆರಂಭವಾಗುವ ಭವ್ಯ ಶೋಭಾಯಾತ್ರೆಯು ವಿವಿಧ ಸಾಂಪ್ರದಾಯಿಕ ಪರಿಕರಗಳು ಹಾಗೂ ಕಲಾತಂಡಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕದ್ರಿ ಮಲ್ಲಿಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸಾಗಲಿದೆ.

ಸುಮಾರು ಮೂರುರಿಂದ ಮೂರುವರೆ ಕಿಲೋಮೀಟರ್ ದೂರ ಸಾಗುವ ಮೆರವಣಿಗೆಯ ಮಾರ್ಗದುದ್ದಕ್ಕೂ ಮೊಸರುಕುಡಿಕೆಗಳನ್ನು ಕಟ್ಟಲಾಗುವುದು. ಸಮಿತಿಯಿಂದ ನೇಮಕಗೊಂಡಿರುವ ಯುವಕರ ತಂಡಗಳು ಸಂಪ್ರದಾಯಬದ್ಧವಾಗಿ ಮೊಸರುಕುಡಿಕೆ ಒಡೆಯುವ ಮೂಲಕ ಉತ್ಸವದ ಸಂಭ್ರಮವನ್ನು ಹೆಚ್ಚಿಸಲಿವೆ ಎಂದು ಸುಧಾಕರ್ ರಾವ್ ಪೇಜಾವರ ಹೇಳಿದರು.

ಸಾಮಾಜಿಕ ಸೇವೆಯಲ್ಲೂ ಸಕ್ರಿಯ

ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಿತಿಯು ಕೇವಲ ವಾರ್ಷಿಕ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವಕ್ಕೆ ಮಾತ್ರ ಸೀಮಿತವಾಗಿಲ್ಲ. ಸ್ವಂತ ಕಟ್ಟಡ ಮತ್ತು ಕಚೇರಿಯ ಮೂಲಕ ವರ್ಷಪೂರ್ತಿ ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದರು.

ಸಮಿತಿಯ ಸ್ವಯಂಸೇವಕರ ತಂಡವು ಸಮಾಜದಲ್ಲಿ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ, ಅಶಕ್ತರು ಹಾಗೂ ನಿರ್ಗತಿಕರಿಗೆ ಸಾಧ್ಯವಾದ ಮಟ್ಟಿಗೆ ನೆರವು ನೀಡುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವುದು, ಸಾಂತ್ವನ ನೀಡುವುದು ಸೇರಿದಂತೆ ಹಲವು ಮಾನವೀಯ ಸೇವಾ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದರು.

ಕದ್ರಿ ದೇವಸ್ಥಾನಕ್ಕೆ ನಿರಂತರ ಸಹಕಾರ

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆಯುವ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಬ್ರಹ್ಮಕಲಶೋತ್ಸವ, ಪುನರ್‌ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಿತಿಯು ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಯ ಅಭಿವೃದ್ಧಿಗೂ ಕೊಡುಗೆ

ಕದ್ರಿ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮಿತಿಯು ನಿರಂತರವಾಗಿ ಕೈಜೋಡಿಸಿದೆ. ಶಾಲೆಯ ವಿವಿಧ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡಲಾಗುತ್ತಿದೆ.

ಸಮಿತಿಯು ಸುಮಾರು ನಾಲ್ಕು ದಶಕಗಳ ಹಿಂದೆಯೇ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕಾಗಿ ವೇದಿಕೆ ನಿರ್ಮಿಸಿಕೊಟ್ಟಿದ್ದು, ಇತ್ತೀಚೆಗೆ ಸುಮಾರು ಮೂರು ಲಕ್ಷ ರೂ. ವೆಚ್ಚದಲ್ಲಿ ಅದನ್ನು ಮತ್ತಷ್ಟು ಸುಸಜ್ಜಿತಗೊಳಿಸಲಾಗಿದೆ. ಮಳೆಗಾಲ ಹಾಗೂ ಬೇಸಿಗೆ ಸಂದರ್ಭದಲ್ಲೂ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಶಾಲೆಯು ಉತ್ತಮ ಶೈಕ್ಷಣಿಕ ಫಲಿತಾಂಶ ದಾಖಲಿಸಿದ್ದು, ಶಾಲೆಯ ಪ್ರಗತಿಗೆ ಸಮಿತಿಯ ಕೊಡುಗೆಯೂ ಇದೆ ಎಂದು ಅವರು ಹೇಳಿದರು.

ರುದ್ರಭೂಮಿ ನಿರ್ವಹಣೆಯಲ್ಲೂ ಸೇವೆ

ಕದ್ರಿಯ ರುದ್ರಭೂಮಿಯ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿಯೂ ಸಮಿತಿಯು ಹಲವು ದಶಕಗಳಿಂದ ತೊಡಗಿಸಿಕೊಂಡಿದೆ. ಸುಮಾರು ನಾಲ್ಕು ದಶಕಗಳಿಂದ ರುದ್ರಭೂಮಿಯಲ್ಲಿ ಅಗತ್ಯ ಮೂಲಸೌಕರ್ಯ, ವಿಶ್ರಾಂತಿ ವ್ಯವಸ್ಥೆ, ಶೆಡ್, ಆಸನ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾರ್ಯದಲ್ಲಿ ಸಮಿತಿ ಸಕ್ರಿಯವಾಗಿ ತೊಡಗಿಕೊಂಡಿದೆ.

ಕ್ರೀಡಾರಂಗ ಸಂರಕ್ಷಣೆಗೆ ಆದ್ಯತೆ

ಸಮಿತಿಯ ಕಚೇರಿ ಮುಂಭಾಗದಲ್ಲಿರುವ ಕ್ರೀಡಾಂಗಣವನ್ನು ಕ್ರೀಡಾ ಚಟುವಟಿಕೆಗಳಿಗಾಗಿಯೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳ ಹಾಗೂ ಯುವಕರ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರೊಂದಿಗೆ ವಿವಿಧ ಕ್ರೀಡಾಕೂಟಗಳಿಗೂ ಸಮಿತಿ ಸಹಕಾರ ನೀಡುತ್ತಿದೆ ಎಂದು ಸುಧಾಕರ್ ರಾವ್ ಪೇಜಾವರ ತಿಳಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಿತಿಯು ಕಳೆದ ಹಲವು ದಶಕಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸೇವಾ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವವನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕಿರಣ್ ಜೋಗಿ , ಸುಜಿತ್ ರಾವ್ , ಮೋಹನ್ ಕೊಪ್ಪಳ , ಮಹೇಶ್ ಪಟೇಲ್ ಕದ್ರಿ , ರವಿ ಕಿರಣ್ ಉಪಸ್ಥಿತರಿದ್ದರು .

SHARE
Loading spinner

One thought on “ಸೆ.4 ಮತ್ತು 5ರಂದು ಕದ್ರಿಯಲ್ಲಿ ಭವ್ಯ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಉತ್ಸವ

Leave a Reply

Your email address will not be published. Required fields are marked *

error: Content is protected !!