ಮಂಗಳೂರು:* ಪುತ್ತೂರು ಶಾಸಕ ಅಶೋಕ್ ರೈ ಅವರು ಬಜರಂಗದಳದ ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರೊಂದಿಗೆ ಒಡನಾಟ ಹೊಂದಿದ್ದಾರೆ. ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಬೆಲೆಯಿಲ್ಲದಂತಾಗಿದೆ. ಇದೀಗ ತಮ್ಮನ್ನು ಕೊಲೆ ಮಾಡಲು ಬಜರಂಗದಳದ ಕಾರ್ಯಕರ್ತರನ್ನು ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಹಕೀಮ್ ಕೂರ್ನಡ್ಕ ತೀವ್ರವಾಗಿ ಆರೋಪಿಸಿದ್ದಾರೆ.

ಸೆ. 1ರಂದು ಪುತ್ತೂರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಅಶೋಕ್ ರೈ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದರು. ಸ್ಥಳದಲ್ಲಿದ್ದ ಪತ್ರಕರ್ತರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕವೂ ಶಾಸಕ ಅಶೋಕ್ ರೈ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಸಂಘರ್ಷಕ್ಕೆ ಮುಂದಾಗುವಂತಹ ವಾತಾವರಣ ನಿರ್ಮಾಣವಾಗಿತ್ತು ಎಂದು ಹಕೀಮ್ ಹೇಳಿದರು.
ಈ ಘಟನೆಯ ಕುರಿತು ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

“ನಾನು ಯಾರ ಮೇಲೂ ವೈಯಕ್ತಿಕ ದ್ವೇಷದಿಂದ ಆರೋಪ ಮಾಡುತ್ತಿಲ್ಲ. ಸಾಮಾನ್ಯ ನಾಗರಿಕನಾಗಿ ನನ್ನ ಮೇಲೆ ನಡೆದಿರುವುದಾಗಿ ನಾನು ಆರೋಪಿಸಿರುವ ದಾಳಿ ಮತ್ತು ಬೆದರಿಕೆಯ ಕುರಿತು ಪ್ರಶ್ನಿಸುವ ಹಾಗೂ ನ್ಯಾಯ ಕೋರುವ ಹಕ್ಕು ನನಗಿದೆ. ಘಟನೆಯ ಸತ್ಯಾಸತ್ಯತೆಯನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು” ಎಂದು ಅವರು ಹೇಳಿದರು.
ಅಶೋಕ್ ರೈ ಅವರು ಸಂವಿಧಾನಬದ್ಧವಾಗಿ ಆಯ್ಕೆಯಾದ ಜನಪ್ರತಿನಿಧಿಯಾಗಿದ್ದು, ಅವರ ಜವಾಬ್ದಾರಿ ಸಾಮಾನ್ಯ ರಾಜಕಾರಣಿಗಿಂತ ಹೆಚ್ಚಿನದಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಂಘರ್ಷಕ್ಕೆ ಕಾರಣವಾಗುವ ಯಾವುದೇ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹಕೀಮ್ ತಿಳಿಸಿದರು.
ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸಹಜ ಭಾಗವಾಗಿದ್ದು, ಹಲ್ಲೆ ಅಥವಾ ಬೆದರಿಕೆಯ ಮೂಲಕ ಅದಕ್ಕೆ ಉತ್ತರಿಸುವುದು ಸರಿಯಾದ ಕ್ರಮವಲ್ಲ. ಜನರು ಹಾಗೂ ರಾಜಕೀಯ ವಿರೋಧಿಗಳು ಕೇಳುವ ಪ್ರಶ್ನೆಗಳಿಗೆ ಪ್ರಜಾಪ್ರಭುತ್ವದ ರೀತಿಯಲ್ಲಿ ಉತ್ತರಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ ಎಂದರು.

ಕಾಂಗ್ರೆಸ್‌ನೊಂದಿಗೆ ನಿಷ್ಠೆ
“ನನ್ನ ಸಂಬಂಧ ಕಾಂಗ್ರೆಸ್ ಪಕ್ಷದೊಂದಿಗೆ ಇಂದು ನಿನ್ನೆಯದಲ್ಲ. ಕಾಂಗ್ರೆಸ್ ನನಗೆ ಅಧಿಕಾರ ಪಡೆಯುವ ಮೆಟ್ಟಿಲಲ್ಲ; ಅದು ನನ್ನ ರಾಜಕೀಯ ನಂಬಿಕೆ. ಅಧಿಕಾರಕ್ಕಾಗಿ ಸಂದರ್ಭಕ್ಕೆ ತಕ್ಕಂತೆ ರಾಜಕೀಯ ಬಣ್ಣ ಬದಲಿಸುವುದು ನನ್ನ ಸ್ವಭಾವವಲ್ಲ. ಸ್ವಂತ ದುಡಿಮೆಯ ಹಣವನ್ನು ಬಳಸಿಕೊಂಡು ಸಮಾಜ ಸೇವೆ ಮಾಡುತ್ತಾ ಜನರ ನಡುವೆ ಕೆಲಸ ಮಾಡುತ್ತಾ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಹಿಂದೆಯೂ ಕಾಂಗ್ರೆಸ್, ಮುಂದೆಯೂ ಕಾಂಗ್ರೆಸ್. ಅಧಿಕಾರ ಯಾರ ಕೈಯಲ್ಲಿದೆ ಎಂಬುದನ್ನು ನೋಡಿ ರಾಜಕೀಯ ನಿಲುವು ಬದಲಾಯಿಸುವ ವ್ಯಕ್ತಿತ್ವ ನನ್ನದಲ್ಲ” ಎಂದು ಹಕೀಮ್ ಸ್ಪಷ್ಟಪಡಿಸಿದರು.

“ನಾನು ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ, ನಾಳೆ ವಿರೋಧ ಪಕ್ಷದವರು ಕೇಳಬಹುದಾದ ಇನ್ನಷ್ಟು ಗಂಭೀರ ಪ್ರಶ್ನೆಗಳಿಗೆ ಶಾಸಕರು ಹೇಗೆ ಉತ್ತರ ನೀಡುತ್ತಾರೆ ಎಂಬುದನ್ನು ಜನರು ಗಮನಿಸಬೇಕು. ನನ್ನನ್ನು ಬೆದರಿಸುವ ಮೂಲಕ ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಯಾರೊಂದಿಗೂ ವೈಯಕ್ತಿಕ ಸಂಘರ್ಷ ಬಯಸುವುದಿಲ್ಲ. ಆದರೆ ಜನರ ಪರವಾಗಿ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದರಿಂದ ಹಿಂದೆ ಸರಿಯುವುದಿಲ್ಲ” ಎಂದರು.
ಅಶೋಕ್ ರೈ ಅವರು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಿದರೆ, ಅವರ ವಿರುದ್ಧ ತಾನೇ ಚುನಾವಣೆಗೆ ಸ್ಪರ್ಧಿಸುವುದಾಗಿ ಹಕೀಮ್ ಕೂರ್ನಡ್ಕ ಘೋಷಿಸಿದರು.


This site is a hidden gem! The graphics are great and the gameplay is very fluid. I’m spending a lot of time on iddragon212 lately