ಜನರ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಬೃಹತ್ ಪಾದಯಾತ್ರೆ – ‘ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನಾ ಸಭೆ

ಮಂಗಳೂರು: ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರು ಪ್ರತಿನಿತ್ಯ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ, ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಭಾರತೀಯ ಜನತಾ ಪಾರ್ಟಿಯ ವತಿಯಿಂದ ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಬೃಹತ್ ಪಾದಯಾತ್ರೆ ಹಾಗೂ ‘ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಜಿಲ್ಲೆಯ ಸಾರ್ವಜನಿಕರು, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರು ಮತ್ತು ಹೋರಾಟದ ಸಂಚಾಲಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಮನವಿ ಮಾಡಿದ್ದಾರೆ.

ಗ್ರಾಮೀಣ ಜನರ ಸಮಸ್ಯೆಗಳಿಗೆ ಸರ್ಕಾರದ ನಿರ್ಲಕ್ಷ್ಯ

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಮ ಪಂಚಾಯತಿಗಳು ಇಂದು ಅನುದಾನದ ಕೊರತೆ ಮತ್ತು ಸಿಬ್ಬಂದಿಗಳ ಅಭಾವದಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಗ್ರಾಮೀಣ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಾದ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ಮತ್ತೊಂದೆಡೆ, 2024 ರಲ್ಲಿ ಪ್ರಾರಂಭಿಸಲಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಖಾಲಿ ಹುದ್ದೆಗಳ (PDO) ನೇಮಕಾತಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಪಂಚಾಯತಿಗಳ ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ.
ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದು ಕಾರ್ಮಿಕರ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ. ದುಡಿಯುವ ಸಿಬ್ಬಂದಿಗಳಿಗೆ ನ್ಯಾಯಯುತ ವೇತನ ನೀಡಲು ಹಿಂದೇಟು ಹಾಕುವ ಸರ್ಕಾರ, ಗ್ರಾಮೀಣ ಆಡಳಿತ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಮಾತನಾಡುವುದು ವಿಪರ್ಯಾಸವಾಗಿದೆ.

ಇ-ಸ್ವತ್ತು ಮತ್ತು ಪಂಚತಂತ್ರ ತಂತ್ರಾಂಶದ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವೆಲ್ಲಿ?

ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕ ಸೇವೆಗಳಿಗಾಗಿ ಬಳಸಲಾಗುತ್ತಿರುವ ಇ-ಸ್ವತ್ತು ಮತ್ತು ಪಂಚತಂತ್ರ ತಂತ್ರಾಂಶಗಳಲ್ಲಿ ಸರ್ವರ್ ಸಮಸ್ಯೆ ಹಾಗೂ ವಿವಿಧ ತಾಂತ್ರಿಕ ದೋಷಗಳು ನಿರಂತರವಾಗಿ ಎದುರಾಗುತ್ತಿವೆ. ಇದರಿಂದ ಆಸ್ತಿ ದಾಖಲೆಗಳು ಸೇರಿದಂತೆ ಅಗತ್ಯ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಜನರ ಕೆಲಸಗಳನ್ನು ಸುಲಭಗೊಳಿಸಬೇಕಾದ ತಂತ್ರಾಂಶಗಳೇ ಜನರಿಗೆ ತೊಂದರೆ ಉಂಟುಮಾಡುತ್ತಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ, ತಂತ್ರಾಂಶಗಳ ಸುಗಮ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಬಡವರ ಸೂರು ಕಸಿದ ಸರ್ಕಾರ!

ಬಡವರು ಸ್ವಂತ ಮನೆ ಹೊಂದಬೇಕೆಂಬ ಉದ್ದೇಶದಿಂದ ಜಾರಿಗೊಳಿಸಲಾದ ಬಸವ ವಸತಿ ಯೋಜನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಗಳಡಿ ಕಳೆದ ಮೂರು ವರ್ಷಗಳಿಂದ ಮನೆಗಳನ್ನು ಮಂಜೂರು ಮಾಡದಿರುವುದು ಬಡ ಹಾಗೂ ವಸತಿರಹಿತ ಕುಟುಂಬಗಳಿಗೆ ಮಾಡಿರುವ ಅನ್ಯಾಯವಾಗಿದೆ.
ಮನೆ ಇಲ್ಲದ ಕುಟುಂಬಗಳು ಇಂದಿಗೂ ಸ್ವಂತ ಸೂರಿಗಾಗಿ ಕಾಯುತ್ತಿವೆ. ಬಡವರ ಪರ ಎಂದು ಹೇಳಿಕೊಳ್ಳುವ ಸರ್ಕಾರ, ಮನೆಗಾಗಿ ಕಾಯುತ್ತಿರುವ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಕೂಡಲೇ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ಮಂಜೂರು ಮಾಡಬೇಕು.
ಅದೇ ರೀತಿ, ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನಗಳ ವಿನ್ಯಾಸ ಅನುಮೋದನೆ ಮತ್ತು ಕಟ್ಟಡ ನಕ್ಷೆಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರವನ್ನು ಪುನಃ ಗ್ರಾಮ ಪಂಚಾಯತಿಗಳಿಗೆ ನೀಡಬೇಕು. ಸ್ಥಳೀಯ ಮಟ್ಟದಲ್ಲಿಯೇ ಅನುಮೋದನೆ ದೊರೆಯುವ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರ ಅನಗತ್ಯ ಅಲೆದಾಟ ಮತ್ತು ವಿಳಂಬವನ್ನು ತಪ್ಪಿಸಬೇಕು.

ಬಜೆಟ್ ಘೋಷಣೆಗಳು ಕಾಗದದಲ್ಲೇ ಉಳಿದಿವೆ!

2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಪ್ರಗತಿಪಥ ರಸ್ತೆ ಅಭಿವೃದ್ಧಿ ಯೋಜನೆ ಹಾಗೂ ಹಿರಿಯ ಅಧಿಕಾರಿಗಳಿಂದ ಗ್ರಾಮ ಪಂಚಾಯತಿಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಬಜೆಟ್‌ನಲ್ಲಿ ಘೋಷಣೆಗಳನ್ನು ಮಾಡಿ ಜನರಲ್ಲಿ ನಿರೀಕ್ಷೆ ಮೂಡಿಸುವುದು ಸುಲಭ; ಆದರೆ ಅವುಗಳನ್ನು ಕಾರ್ಯರೂಪಕ್ಕೆ ತಂದು ಗ್ರಾಮೀಣ ಜನರಿಗೆ ಪ್ರಯೋಜನ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ.
ಯೋಜನೆಗಳನ್ನು ಘೋಷಿಸಿ ಅನುಷ್ಠಾನಗೊಳಿಸದೆ ಇರುವುದು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಈ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಿ, ಗ್ರಾಮೀಣ ಪ್ರದೇಶಗಳ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು.

ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೂ ಅನ್ಯಾಯ

ಗೃಹಲಕ್ಷ್ಮಿ ಯೋಜನೆಯ ಸಹಾಯಧನ, ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನದ ಮಾಸಾಶನಗಳು ಕಳೆದ ಆರು ತಿಂಗಳಿಂದ ಬಿಡುಗಡೆಯಾಗಿಲ್ಲ ಎಂಬ ಗಂಭೀರ ಸಮಸ್ಯೆ ಜನರನ್ನು ಕಾಡುತ್ತಿದೆ. ಸರ್ಕಾರದ ಈ ವಿಳಂಬದಿಂದ ಮಹಿಳೆಯರು, ಹಿರಿಯ ನಾಗರಿಕರು ಮತ್ತು ವಿಧವೆಯರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಮಹಿಳೆಯರ ಸಬಲೀಕರಣ ಮತ್ತು ಬಡವರ ಕಲ್ಯಾಣದ ಬಗ್ಗೆ ಮಾತನಾಡುವ ಸರ್ಕಾರ, ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಹಣ ತಲುಪಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕು. ಬಾಕಿ ಇರುವ ಸಹಾಯಧನ ಮತ್ತು ಪಿಂಚಣಿಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು.

ವಿಳಂಬವಾಗುತ್ತಿರುವ ಚುನಾವಣಾ ಪ್ರಕ್ರಿಯೆ

ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಪ್ರಕ್ರಿಯೆಯನ್ನು ನಡೆಸಲು ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಅಧಿಕಾರ ವಿಕೇಂದ್ರೀಕರಣದ ಭಾಗವಾದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಆದಷ್ಟು ಶೀಘ್ರವಾಗಿ ಚುನಾವಣೆ ನಡೆಸಿ ಪ್ರಜಾಪ್ರಭುತ್ವದ ಆಶಯವನ್ನು ಉಳಿಸುವಂತಹ ಕೆಲಸವನ್ನು ಮಾಡಬೇಕಿದೆ

ನಗರ ಸ್ಥಳೀಯ ಸಂಸ್ಥೆಗಳೂ ಸಮಸ್ಯೆಗಳ ಸುಳಿಯಲ್ಲಿ

ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಸಿಬ್ಬಂದಿಗಳ ಕೊರತೆ ಗಂಭೀರವಾಗಿದೆ. ಅಗತ್ಯ ಸಿಬ್ಬಂದಿಗಳಿಲ್ಲದೆ ಸಾರ್ವಜನಿಕ ಸೇವೆಗಳು ಮತ್ತು ನಗರಾಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸದಿರುವುದು ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ.
ಇನ್ನು, ಕಟ್ಟಡ ಪರವಾನಗಿ ನೀಡಲು ಬಳಸಲಾಗುತ್ತಿರುವ LBPAS ತಂತ್ರಾಂಶದಲ್ಲಿನ ತಾಂತ್ರಿಕ ದೋಷಗಳಿಂದಾಗಿ ಹಲವಾರು ಕಟ್ಟಡ ಪರವಾನಗಿ ಅರ್ಜಿಗಳು ಬಾಕಿ ಉಳಿದಿವೆ. ಇದರಿಂದ ಸಾರ್ವಜನಿಕರು, ಕಟ್ಟಡ ನಿರ್ಮಾಣದಾರರು ಮತ್ತು ಉದ್ಯಮಿಗಳು ಅನಗತ್ಯ ವಿಳಂಬ ಹಾಗೂ ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದಾರೆ. ಈ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ, ಬಾಕಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಜನರ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ

ಗ್ರಾಮ ಪಂಚಾಯತಿಗಳಿಂದ ಹಿಡಿದು ನಗರ ಸ್ಥಳೀಯ ಸಂಸ್ಥೆಗಳವರೆಗೆ ಆಡಳಿತ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಅನುದಾನದ ಕೊರತೆ, ಸಿಬ್ಬಂದಿಗಳ ಅಭಾವ, ಬಾಕಿ ನೇಮಕಾತಿಗಳು, ಕನಿಷ್ಠ ವೇತನದ ಸಮಸ್ಯೆ, ವಸತಿ ಯೋಜನೆಗಳ ಸ್ಥಗಿತ, ತಂತ್ರಾಂಶಗಳ ತಾಂತ್ರಿಕ ದೋಷಗಳು ಮತ್ತು ಕಲ್ಯಾಣ ಯೋಜನೆಗಳ ಹಣ ಬಿಡುಗಡೆ ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳು ಮುಂದುವರಿದಿದ್ದರೂ ಸರ್ಕಾರ ಅವುಗಳನ್ನು ಪರಿಹರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಂಡಿಲ್ಲ.

ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧದ ಹೋರಾಟವಲ್ಲ; ಇದು ಜನರ ಹಕ್ಕುಗಳನ್ನು ರಕ್ಷಿಸುವ, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಹಾಗೂ ಸರ್ಕಾರವನ್ನು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸುವ ಜನಪರ ಹೋರಾಟವಾಗಿದೆ.
ಆದ್ದರಿಂದ, ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಬೃಹತ್ ಪಾದಯಾತ್ರೆ ಹಾಗೂ ‘ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನಾ ಸಭೆಗಳಲ್ಲಿ ಜಿಲ್ಲೆಯ ಸಾರ್ವಜನಿಕರು, ಮಹಿಳೆಯರು, ಯುವಕರು, ಕಾರ್ಮಿಕರು, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಜನರ ಸಮಸ್ಯೆಗಳಿಗೆ ನ್ಯಾಯ ದೊರೆಯುವವರೆಗೆ ಹಾಗೂ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವವರೆಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟವನ್ನು ಮುಂದುವರಿಸಲು ಎಲ್ಲರೂ ಕೈಜೋಡಿಸಬೇಕೆಂದು ವಿಧಾನ ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ.


SHARE
Loading spinner

Leave a Reply

Your email address will not be published. Required fields are marked *

error: Content is protected !!