ರಾಜೇಶ್ ನಾಯಕ್ ಕರೋಪಾಡಿ ಗಡಿಪಾರು ಆದೇಶ ಖಂಡನೀಯ: ಬಂಟ್ವಾಳ ಬಿಜೆಪಿ

ಹಿಂದೂ ಸಂಘಟನೆಯ ಮುಖಂಡ ರಾಜೇಶ್ ನಾಯಕ್ ಕರೋಪಾಡಿ ಅವರನ್ನು ಪೊಲೀಸ್ ಇಲಾಖೆ ಗಡಿಪಾರು ಮಾಡಿರುವ ಆದೇಶ ಖಂಡನೀಯ. ಪೊಲೀಸ್ ಇಲಾಖೆಯ ಈ ಏಕಪಕ್ಷೀಯ ಕ್ರಮದ ವಿರುದ್ಧ ಬಂಟ್ವಾಳ ಬಿಜೆಪಿ ಮಂಡಲ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ರಾಜೇಶ್ ನಾಯಕ್ ಕರೋಪಾಡಿ ಅವರು ಕರೋಪಾಡಿ ಗಡಿಭಾಗದಲ್ಲಿ ಹಲವು ವರ್ಷಗಳಿಂದ ಸಂಘಟನಾತ್ಮಕ ಹಾಗೂ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಬಡವರು ಹಾಗೂ ದೀನದಲಿತರ ಪರವಾಗಿ ವಿವಿಧ ರೀತಿಯ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಉದ್ದೇಶಪೂರ್ವಕವಾಗಿ ಗಡಿಪಾರು ಕ್ರಮ ಕೈಗೊಳ್ಳಲಾಗಿದ್ದು, ಇದರ ಮೂಲಕ ಹಿಂದೂ ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಂಟ್ವಾಳ ಬಿಜೆಪಿ ಮಂಡಲ ಆರೋಪಿಸಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಅನಗತ್ಯ ಒತ್ತಡ ಹೇರುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ನಿರ್ದಿಷ್ಟ ವ್ಯಕ್ತಿಗಳು ಹಾಗೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ಮಂಡಲ ತಿಳಿಸಿದೆ.

ಲೆಕ್ಕಾಚಾರ ತಪ್ಪಲಿದೆ: ಬಿಜೆಪಿ

ಹಿಂದೂ ಕಾರ್ಯಕರ್ತರನ್ನು ಕಾನೂನಿನ ನೆಪದಲ್ಲಿ ಅನಾವಶ್ಯಕವಾಗಿ ಕಟ್ಟಿಹಾಕುವ ಮೂಲಕ ಅವರ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಅದು ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಬಹುದು. ಇಂತಹ ಕ್ರಮಗಳು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸುವುದರ ಜತೆಗೆ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗುವ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಬಿಜೆಪಿ ಎಚ್ಚರಿಸಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದ್ದು, ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಕಾನೂನುಬದ್ಧ ಪ್ರಕ್ರಿಯೆ, ಸಾಕ್ಷ್ಯಾಧಾರ ಹಾಗೂ ನಿಷ್ಪಕ್ಷಪಾತತೆಯನ್ನು ಪರಿಗಣಿಸಬೇಕು. ರಾಜಕೀಯ ಪ್ರೇರಿತ ಅಥವಾ ಏಕಪಕ್ಷೀಯ ಕ್ರಮಗಳಿಗೆ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಬಾರದು ಎಂದು ಬಿಜೆಪಿ ಮಂಡಲ ಆಗ್ರಹಿಸಿದೆ.

ಹಿಂದೂ ಕಾರ್ಯಕರ್ತರು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರನ್ನು ಕಾನೂನಿನ ನೆಪದಲ್ಲಿ ಅನಗತ್ಯವಾಗಿ ನಿರ್ಬಂಧಿಸುವ ಪ್ರಯತ್ನ ಮುಂದುವರಿದರೆ, ಜಿಲ್ಲೆಯಲ್ಲಿ ಉಂಟಾಗಬಹುದಾದ ಅಶಾಂತಿ ಹಾಗೂ ಪ್ರತಿಕೂಲ ಪರಿಸ್ಥಿತಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆಗಾರವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ.

ರಾಜೇಶ್ ನಾಯಕ್ ಕರೋಪಾಡಿ ಅವರ ಗಡಿಪಾರು ಆದೇಶವನ್ನು ಪೊಲೀಸ್ ಇಲಾಖೆ ಮರುಪರಿಶೀಲಿಸಿ, ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು ಎಂದು ಬಂಟ್ವಾಳ ಬಿಜೆಪಿ ಮಂಡಲ ಒತ್ತಾಯಿಸಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!