ಕದ್ರಿ ದೇವಾಲಯದ ರಾಜಾಂಗಣದಲ್ಲಿ ವೈಭವದಿಂದ ನಡೆದ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವಕೃಷ್ಣವೇಷ ಸ್ಪರ್ಧೆಯಲ್ಲಿ ಸಾವಿರಾರು ಪುಟಾಣಿ ಕೃಷ್ಣರು; 44 ವಿಭಾಗಗಳಲ್ಲಿ 12 ವೇದಿಕೆಗಳಲ್ಲಿ ಸ್ಪರ್ಧೆ

ಮಂಗಳೂರು: ಪುಟ್ಟ ಪುಟ್ಟ ಹೆಜ್ಜೆಗಳ ಗೆಜ್ಜೆನಾದ, ತುಂಟ ನಗು, ನಯನ ಮನೋಹರ ನೋಟ—ಇಂತಹ ಅಪೂರ್ವ ದೃಶ್ಯಗಳಿಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣ ಸಾಕ್ಷಿಯಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವ ಹಾಗೂ ಕೃಷ್ಣವೇಷ ಸ್ಪರ್ಧೆ ಶುಕ್ರವಾರ ಕದ್ರಿ ದೇವಸ್ಥಾನದ ಆವರಣದಲ್ಲಿ ವೈಭವದಿಂದ ನಡೆಯಿತು.

ಬೆಳಗ್ಗೆ 9 ಗಂಟೆಗೆ ‘ವರ್ಣ ವೈಭವ’ದೊಂದಿಗೆ ಸ್ಪರ್ಧೆಗಳು ಆರಂಭಗೊಂಡವು. ಬೆಳಗ್ಗೆ 10.30ಕ್ಕೆ ಸಾಂಪ್ರದಾಯಿಕವಾಗಿ ಮೊಸರು ಕಡೆದು ಬೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆ ನಡೆಯಿತು. ಬಳಿಕ ಕೃಷ್ಣವೇಷದ ಯಕ್ಷಗಾನ ಸ್ಪರ್ಧೆ ಸೇರಿದಂತೆ ವಿವಿಧ ವಿಭಾಗಗಳ ಸ್ಪರ್ಧೆಗಳು ರಂಗೇರಿದವು.

ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ಹಾಗೂ ಧಾರ್ಮಿಕ ಚಿಂತಕ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಲ್ಕೂರ ಪ್ರತಿಷ್ಠಾನ ಆಯೋಜಿಸುತ್ತಿರುವ ಕೃಷ್ಣವೇಷ ಸ್ಪರ್ಧೆ ಇದೀಗ ರಾಷ್ಟ್ರೀಯ ಮಕ್ಕಳ ಉತ್ಸವವಾಗಿ ರೂಪುಗೊಂಡಿರುವುದು ಸಂತಸದ ಸಂಗತಿ. ಸನಾತನ ಧರ್ಮದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ದೊರೆಯುವ ನೆಮ್ಮದಿ, ಸುಖ ಮತ್ತು ಶಾಂತಿ ವಿಶಿಷ್ಟವಾದುದು. ಈ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮಕ್ಕಳಿಗೆ ಪರಿಚಯಿಸುವ ಉತ್ತಮ ಮಾಧ್ಯಮವಾಗಿ ಕೃಷ್ಣವೇಷ ಸ್ಪರ್ಧೆ ರೂಪುಗೊಂಡಿದೆ,” ಎಂದರು.

“ಯಶೋದೆಗೆ ಕೃಷ್ಣ ನೀಡಿದ ಸಂತೋಷದಂತೆ, ಮಕ್ಕಳು ಕೃಷ್ಣನ ವೇಷ ಧರಿಸಿ ಬಂದಾಗ ತಾಯಂದಿರಿಗೂ ಅಪಾರ ಸಂತೋಷವಾಗುತ್ತದೆ. ಕೇವಲ ಕೃಷ್ಣನ ವೇಷ ಧರಿಸುವುದಷ್ಟೇ ಮುಖ್ಯವಲ್ಲ; ಕೃಷ್ಣನ ಮಹತ್ವ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕು. ಸತ್ಚಾರಿತ್ರ್ಯವುಳ್ಳ, ಸಂಸ್ಕೃತಿಯುಳ್ಳ ಮಕ್ಕಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ,” ಎಂದು ಅವರು ಹೇಳಿದರು.

ಕದ್ರಿ ಮಂಜುನಾಥ ದೇವಾಲಯ ಸಮಿತಿಯ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಮಾತನಾಡಿ, “ಹಲವು ವರ್ಷಗಳಿಂದ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕೃಷ್ಣವೇಷ ಸ್ಪರ್ಧೆಯನ್ನು ರಾಷ್ಟ್ರೀಯ ಮಕ್ಕಳ ಉತ್ಸವವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳವರೆಗೆ ಕೃಷ್ಣನ ವಿವಿಧ ವೇಷಗಳನ್ನು ಧರಿಸಿ ಭಾಗವಹಿಸುವುದು ಮತ್ತು ತಮ್ಮ ಹೆತ್ತವರಿಗೆ ಸಂತೋಷ ನೀಡುತ್ತಿರುವುದು ವಿಶೇಷ. ಜಾತಿ-ಮತ ಭೇದವಿಲ್ಲದೆ ಎಲ್ಲರೂ ಬರುವ ಈ ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ,” ಎಂದರು.

“ಶ್ರೀ ಮಂಜುನಾಥ ಹಾಗೂ ಶ್ರೀಕೃಷ್ಣ ದೇವರು ಎಲ್ಲ ಮಕ್ಕಳಿಗೂ ಆರೋಗ್ಯ, ವಿದ್ಯೆ, ಬುದ್ಧಿ ಮತ್ತು ಐಶ್ವರ್ಯವನ್ನು ಕರುಣಿಸಲಿ. ಈ ಉತ್ಸವ ಪ್ರತಿವರ್ಷ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ,” ಎಂದು ಅವರು ಹಾರೈಸಿದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, “ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರ ವಿಶೇಷ ಮುತುವರ್ಜಿಯಲ್ಲಿ ಜನಮೆಚ್ಚುಗೆ ಪಡೆದಿರುವ ಈ ಕಾರ್ಯಕ್ರಮ ಕದ್ರಿ ದೇವಸ್ಥಾನದ ಪ್ರಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ತುಳುನಾಡಿನ ಮಂಗಳೂರಿನಲ್ಲಿ ಸಹಸ್ರಾರು ಪುಟಾಣಿ ಮಕ್ಕಳು ಕೃಷ್ಣವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ,” ಎಂದರು.

“ಮುದ್ದು ಕೃಷ್ಣ, ಬಾಲಕೃಷ್ಣ, ತೊಟ್ಟಿಲ ಕೃಷ್ಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಸಾವಿರಾರು ಮಕ್ಕಳು ಹಲವು ವೇದಿಕೆಗಳಲ್ಲಿ ಭಾಗವಹಿಸುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ಇಂತಹ ಬೃಹತ್ ಮಟ್ಟದ ಕೃಷ್ಣವೇಷ ಸ್ಪರ್ಧೆ ಮಂಗಳೂರಿನಲ್ಲಿ ನಡೆಯುತ್ತಿರುವುದು ವಿಶಿಷ್ಟ ಸಾಧನೆಯಾಗಿದ್ದು, ಮುಂದೊಂದು ದಿನ ಇದು ಗಿನ್ನಿಸ್ ದಾಖಲೆಯತ್ತ ಸಾಗಿದರೂ ಅಚ್ಚರಿಯಿಲ್ಲ,” ಎಂದು ಅವರು ಹೇಳಿದರು.

“ತಮ್ಮ ಮಕ್ಕಳಲ್ಲಿ ಕೃಷ್ಣನನ್ನು ಕಾಣಬೇಕೆಂಬ ಆಸೆಯಿಂದ ತಾಯಂದಿರು ಸಾಕಷ್ಟು ಶ್ರಮವಹಿಸಿ ಮಕ್ಕಳನ್ನು ಕೃಷ್ಣನ ವೇಷದಲ್ಲಿ ಸಜ್ಜುಗೊಳಿಸಿ ಕರೆತರುತ್ತಿದ್ದಾರೆ. ಇದು ಕೇವಲ ಸ್ಪರ್ಧೆಯಲ್ಲ; ದೇವರ ಸಾನ್ನಿಧ್ಯ, ಸಂಸ್ಕೃತಿ ಮತ್ತು ಭಕ್ತಿಯೊಂದಿಗೆ ಮಕ್ಕಳನ್ನು ಬೆಸೆಯುವ ಅಪೂರ್ವ ಕಾರ್ಯಕ್ರಮವಾಗಿದೆ,” ಎಂದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತೊಟ್ಟಿಲ ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಶೋರ ಕೃಷ್ಣ, ಗೀತಾ ಕೃಷ್ಣ, ರಾಧಾಕೃಷ್ಣ, ರಾಧಾ ಮಾಧವ, ದೇವಕಿ ಕೃಷ್ಣ, ಯಶೋದ ಕೃಷ್ಣ, ವಸುದೇವ ಕೃಷ್ಣ ಸೇರಿದಂತೆ ಒಟ್ಟು 44 ವಿಭಾಗಗಳಲ್ಲಿ 12 ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆದವು.

ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಉಡುಗೊರೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಂ.ಬಿ. ಪುರಾಣಿಕ್, ಜಿ.ಕೆ. ಭಟ್, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಶ್ರೀನಾಥ್, ಆಶಾ ಪ್ರಭಾಕರ್, ಶರವು ರಾಜ ಗಣಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

One thought on “ಕದ್ರಿ ದೇವಾಲಯದ ರಾಜಾಂಗಣದಲ್ಲಿ ವೈಭವದಿಂದ ನಡೆದ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವಕೃಷ್ಣವೇಷ ಸ್ಪರ್ಧೆಯಲ್ಲಿ ಸಾವಿರಾರು ಪುಟಾಣಿ ಕೃಷ್ಣರು; 44 ವಿಭಾಗಗಳಲ್ಲಿ 12 ವೇದಿಕೆಗಳಲ್ಲಿ ಸ್ಪರ್ಧೆ

Leave a Reply

Your email address will not be published. Required fields are marked *

error: Content is protected !!