ಪರಿಸರ ಕಾಯ್ದೆ ತಿದ್ದುಪಡಿ ಬಳಿಕ ದಂಡ ವಸೂಲಿಯಲ್ಲಿ ಲೋಪ; ಸರ್ಕಾರಕ್ಕೆ ₹1,200 ಕೋಟಿ ನಷ್ಟ: ಬೆನೆಡಿಕ್ಟ್ ಸಿ. ಫೆರ್ನಾಂಡೀಸ್

ಮಂಗಳೂರು:ಪರಿಸರ ಸಂರಕ್ಷಣೆ ಕಾಯ್ದೆ-1986ರ ಸೆಕ್ಷನ್ 15ಕ್ಕೆ 2024ರ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ತಿದ್ದುಪಡಿಯ ಬಳಿಕ ದಂಡ ವಿಧಿಸುವ ಹಾಗೂ ವಸೂಲಿ ಮಾಡುವ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಾಗಿವೆ. ಇದರಿಂದ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಕ್ಕೆ ಅಂದಾಜು ₹1,200 ಕೋಟಿ ನಷ್ಟ ಉಂಟಾಗಿದೆ ಎಂದು ದ.ಕ. ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘದ ಕಾರ್ಯದರ್ಶಿ ಬೆನೆಡಿಕ್ಟ್ ಸಿ. ಫೆರ್ನಾಂಡೀಸ್ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿದ್ದುಪಡಿಯ ಮೊದಲು ಪರಿಸರ ಕಾಯ್ದೆ ಉಲ್ಲಂಘನೆಗೆ ಕನಿಷ್ಠ ₹1 ಲಕ್ಷ ದಂಡ ಅಥವಾ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ತಿದ್ದುಪಡಿಯ ಬಳಿಕ ಸಾರ್ವಜನಿಕರಿಗೆ ಕನಿಷ್ಠ ₹10 ಸಾವಿರದಿಂದ ಗರಿಷ್ಠ ₹15 ಲಕ್ಷ, ಕಂಪನಿಗಳಿಗೆ ಕನಿಷ್ಠ ₹1 ಲಕ್ಷ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ತಿಂಗಳ ಮೂಲ ವೇತನದ ಆಧಾರದ ಮೇಲೆ ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ವಿವರಿಸಿದರು.

ತಿದ್ದುಪಡಿಯ ಬಳಿಕ ದಂಡ ವಿಧಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ಹಿಂಪಡೆಯಲಾಗಿದೆ. ಪರಿಸರ ಉಲ್ಲಂಘನೆಗಳ ಕುರಿತು ಸಾರ್ವಜನಿಕರು ಅಥವಾ ಅಧಿಕಾರಿಗಳು ‘ಫಾರ್ಮ್-1’ ಮೂಲಕ ರಾಜ್ಯದ ಅಡ್ಜುಡಿಕೇಟಿಂಗ್ ಆಫೀಸರ್‌ಗೆ ದೂರು ಸಲ್ಲಿಸಬೇಕಾಗಿದೆ. ಅಡ್ಜುಡಿಕೇಟಿಂಗ್ ಆಫೀಸರ್ ಆಗಿ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಕಸ ವಿಲೇವಾರಿ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಹಾಗೂ ಏಕಬಳಕೆ ಪ್ಲಾಸ್ಟಿಕ್ ಸೇರಿದಂತೆ ವಿವಿಧ ಪರಿಸರ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಸುಮಾರು 4.73 ಲಕ್ಷ ಪ್ರಕರಣಗಳು ದಾಖಲಾಗಿವೆ. ಕನಿಷ್ಠ ₹10 ಸಾವಿರದಂತೆ ದಂಡ ವಿಧಿಸಿದ್ದರೆ ಸುಮಾರು ₹474 ಕೋಟಿ ಸಂಗ್ರಹವಾಗಬೇಕಿತ್ತು. ಆದರೆ ಕೇವಲ ₹79 ಕೋಟಿ ಮಾತ್ರ ವಸೂಲಾಗಿದ್ದು, 2024–25ನೇ ಸಾಲಿನಲ್ಲೇ ಸರ್ಕಾರಕ್ಕೆ ಸುಮಾರು ₹395 ಕೋಟಿ ನಷ್ಟ ಉಂಟಾಗಿದೆ ಎಂದು ಬೆನೆಡಿಕ್ಟ್ ಫೆರ್ನಾಂಡೀಸ್ ಹೇಳಿದರು. ಮುಂದಿನ ವರ್ಷಗಳನ್ನೂ ಪರಿಗಣಿಸಿದರೆ ಒಟ್ಟು ನಷ್ಟ ₹1,200 ಕೋಟಿಯಷ್ಟಾಗಬಹುದು ಎಂದು ಅಂದಾಜಿಸಿದರು.

2024ರ ಏಪ್ರಿಲ್ 1ರಿಂದ ಸ್ಥಳೀಯ ಸಂಸ್ಥೆಗಳಿಗೆ ದಂಡ ವಿಧಿಸುವ ಅಧಿಕಾರವಿಲ್ಲದಿದ್ದರೂ, ಹಲವು ಕಡೆ ₹500 ಹಾಗೂ ₹1,000 ದಂಡ ವಿಧಿಸಿರುವುದು ಕಂಡುಬಂದಿದೆ. ಹೀಗಾಗಿ ನಿಯಮಾನುಸಾರ ವಸೂಲಿ ಮಾಡಬೇಕಿದ್ದ ಮೊತ್ತವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಿರುವ ಸಂಬಂಧಪಟ್ಟ ಅಧಿಕಾರಿಗಳಿಂದಲೇ ನಷ್ಟದ ಹಣವನ್ನು ವಸೂಲಿ ಮಾಡಬೇಕು ಎಂದು ಸಂಘ ಆಗ್ರಹಿಸಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಮನವಿ ಮತ್ತು ನೋಟಿಸ್ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಚಾರ್ಲ್ಸ್ ಅನಿಲ್ ಡಿಸೋಜ , ಪ್ರಮುಖರಾದ ಮಹಮ್ಮದ್ ನಿಹಾಲ್ ಹಾಗೂ ಅಶ್ವಿನಿ ಕೆ. ಭಟ್** ಉಪಸ್ಥಿತರಿದ್ದರು.

SHARE
Loading spinner

One thought on “ಪರಿಸರ ಕಾಯ್ದೆ ತಿದ್ದುಪಡಿ ಬಳಿಕ ದಂಡ ವಸೂಲಿಯಲ್ಲಿ ಲೋಪ; ಸರ್ಕಾರಕ್ಕೆ ₹1,200 ಕೋಟಿ ನಷ್ಟ: ಬೆನೆಡಿಕ್ಟ್ ಸಿ. ಫೆರ್ನಾಂಡೀಸ್

Leave a Reply

Your email address will not be published. Required fields are marked *

error: Content is protected !!