ಕುಂಜತ್ತಬೈಲ್‌ನಲ್ಲಿ ಮನೆಗೆ ಜೆಸಿಬಿಯಿಂದ ಹಾನಿ: ಲ್ಯಾಂಡ್ ಮಾಫಿಯಾ ವಿರುದ್ಧ ಆರೋಪ

ಮಂಗಳೂರು: ನಗರದ ಅಭಿವೃದ್ಧಿಯ ವೇಗ ಹೆಚ್ಚುತ್ತಿರುವ ಬೆನ್ನಲ್ಲೇ ಭೂಮಿಯ ಬೆಲೆ ಏರಿಕೆಯನ್ನು ಬಳಸಿಕೊಂಡು ಬಡವರ ಜಾಗಗಳನ್ನು ಕಬಳಿಸಲು ಭೂ ಮಾಫಿಯಾ ಸಕ್ರಿಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತಬೈಲ್‌ನಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಿ.ಜೆ. ಜೋಯ್ ಅವರ ಮನೆಗೆ ಜೆಸಿಬಿಯಿಂದ ಹಾನಿ ಮಾಡಿರುವ ಘಟನೆ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಜಾರಿಯೋ ಆರೋಪಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕೇರಳದವರಾದ ಸಿ.ಜೆ. ಜೋಯ್ ಕಳೆದ ಸುಮಾರು 35 ವರ್ಷಗಳಿಂದ ಕುಂಜತ್ತಬೈಲ್‌ನ ಸರ್ಕಾರಿ ನಿವೇಶನದಲ್ಲಿ ನಿರ್ಮಿಸಿರುವ ಮನೆಯಲ್ಲಿ ವಾಸವಾಗಿದ್ದಾರೆ. ಜೋಯ್ ಹಾಗೂ ಅವರ ಪತ್ನಿ ಲಿಜಿಮೋಲ್ ಅವರಿಗೆ ಜಾಗ ಖಾಲಿ ಮಾಡುವಂತೆ ಕೆಲಕಾಲದಿಂದ ಒತ್ತಡ ಹಾಗೂ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದರು.

ಸೆಪ್ಟೆಂಬರ್ 3ರಂದು ಜೋಯ್ ದಂಪತಿ ಮನೆಯಲ್ಲಿ ಇಲ್ಲದ ವೇಳೆ ಜೆಸಿಬಿ ಮೂಲಕ ಮನೆಯ ಪಂಚಾಂಗದ ಸಮೀಪದ ಮಣ್ಣನ್ನು ಅಗೆಯಲಾಗಿದ್ದು, ಇದರಿಂದ ಮನೆಯ ಅಡಿಪಾಯಕ್ಕೆ ಅಪಾಯ ಎದುರಾಗಿದೆ. ಭಾರಿ ಮಳೆ ಬಂದಲ್ಲಿ ಮನೆ ಕುಸಿಯುವ ಸಾಧ್ಯತೆಯಿದ್ದು, ಜೀವಹಾನಿ ಹಾಗೂ ಆಸ್ತಿ ನಷ್ಟದ ಆತಂಕವಿದೆ ಎಂದು ರೊಜಾರಿಯೋ ತಿಳಿಸಿದರು.

ಘಟನೆಯ ಬಳಿಕ ಸಮೀಪದ ಕೂಳ ಫ್ರೆಂಡ್ಸ್ ಕ್ಲಬ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಜೆಸಿಬಿಯೊಂದು ಜೋಯ್ ಅವರ ಮನೆ ಕಡೆಗೆ ತೆರಳಿರುವುದು ಕಂಡುಬಂದಿದೆ ಎನ್ನಲಾಗಿದೆ. ಬಳಿಕ ಜೆಸಿಬಿ ಚಾಲಕನನ್ನು ವಿಚಾರಿಸಿದಾಗ, ದಯಾನಂದ ಶೆಟ್ಟಿ ಎಂಬವರು ಹಣ ನೀಡಿ ಮನೆ ಬಳಿಯ ಜಾಗವನ್ನು ಅಗೆಯುವಂತೆ ಸೂಚಿಸಿದ್ದರಿಂದ ತಾನು ಕೆಲಸ ಮಾಡಿದ್ದಾಗಿ ಚಾಲಕ ಒಪ್ಪಿಕೊಂಡಿದ್ದಾನೆ ಎಂದು ರೊಜಾರಿಯೋ ಆರೋಪಿಸಿದರು. ಈ ಸಂಬಂಧದ ಆಡಿಯೋ ಹಾಗೂ ವಿಡಿಯೋ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದರು.

ಕನ್ನಡ ಓದಲು ಹಾಗೂ ಬರೆಯಲು ಬಾರದ ಜೋಯ್ ದಂಪತಿ ಘಟನೆಯ ಬಳಿಕ ಕಾವೂರು ಪೊಲೀಸ್ ಠಾಣೆಗೆ ತೆರಳಿ ಮೌಖಿಕವಾಗಿ ದೂರು ನೀಡಿದ್ದರು. ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸದೆ ಪೊಲೀಸರು ಸಣ್ಣ ಪ್ರಕರಣದಂತೆ ದೂರು ದಾಖಲಿಸಿಕೊಂಡಿದ್ದಾರೆ ಹಾಗೂ ಸ್ಥಳಕ್ಕೆ ಬಂದ ಪೊಲೀಸರು ತಮ್ಮನ್ನು ಬೆದರಿಸಿದ್ದಾರೆ ಎಂದು ಜೋಯ್ ಆರೋಪಿಸಿದ್ದಾರೆ.

ಜೋಯ್ ಅವರ ಮನೆಯ ಕಂಪೌಂಡ್ ಹಾಗೂ ಸಾರ್ವಜನಿಕ ಕಾಲುವೆಯ ನಡುವೆ ಸ್ಪಷ್ಟವಾದ ಗಡಿ ಇದ್ದು, ಇದು ಗಡಿ ವಿವಾದದ ಪ್ರಕರಣವಲ್ಲ ಎಂದು ರೊಜಾರಿಯೋ ಹೇಳಿದರು. ಮನೆಗೆ ಹಾನಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕ ಕಾಲುವೆಗೂ ಹಾನಿಯಾಗಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಆರೋಪವೂ ಕೇಳಿಬಂದಿದೆ.

ಈ ಕುರಿತು ಪೊಲೀಸ್ ಕಮಿಷನರ್‌ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಆದರೆ ಈವರೆಗೆ ಪ್ರಕರಣದಲ್ಲಿ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ದೂರಿದರು.

ನಗರದ ಅಭಿವೃದ್ಧಿಯ ಹೆಸರಿನಲ್ಲಿ ಸಾಮಾನ್ಯ ಜನರ ಜಾಗಗಳನ್ನು ಕಬಳಿಸುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು. ಪ್ರಕರಣವನ್ನು ಕೇವಲ ‘ಸಿವಿಲ್ ವಿವಾದ’ ಎಂದು ಪರಿಗಣಿಸದೆ, ಮನೆಗೆ ಹಾನಿ ಮಾಡಿದವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಂಡು ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ರಾಬರ್ಟ್ ರೊಜಾರಿಯೋ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿ.ಜೆ. ಜೋಯ್, ಲಿಜಿಮೋಲ್, ಜೋನ್ ಕೆ.ಜೆ., ಗೋಪಾಲ್ ಪೂಜಾರಿ, ಥಾಮಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!