ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು ಇದರ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.13ರಿಂದ 15ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.

ಸೆ.13ರಂದು ಸಂಜೆ 4 ಗಂಟೆಗೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ವಿಶ್ವೇಶ್ವರನ ವಿಗ್ರಹ ಹಾಗೂ ಭಕ್ತರು ಸಮರ್ಪಿಸಿದ ವಿವಿಧ ಹರಕೆ ಸಾಮಗ್ರಿಗಳನ್ನು ಗಣೇಶ ಮಂಟಪಕ್ಕೆ ತರಲಾಗುವುದು. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಶ್ರೀಮತಿ ಮಲ್ಲಿಕಾ ಹಾಗೂ ನಿವೃತ್ತ ಸೈನಿಕ ಸೀತಾರಾಮ್ ಪೂಜಾರಿ ದೀಪ ಬೆಳಗಿಸಲಿದ್ದಾರೆ. ಡಾ. ಅಣ್ಣಯ್ಯ ಕುಲಾಲ್ ಉಳ್ಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ‘ಕುಸಾಲ್ಡ್ ಗುರಿಕಾರೆ’ ದಿನೇಶ್ ಕೊಡಪದವು ಅವರ ಸಾರಥ್ಯದಲ್ಲಿ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ ನಡೆಯಲಿದೆ.

ಸೆ.14ರಂದು ಬೆಳಿಗ್ಗೆ 7 ಗಂಟೆಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿಗಳ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನೆರವೇರಲಿದೆ. ಬೆಳಿಗ್ಗೆ 9.30ಕ್ಕೆ ಪ್ರತಿಷ್ಠಾಪನಾ ಸಭೆ ನಡೆಯಲಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಹಸಿರು ತೆನೆ ವಿತರಣೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಶ್ರೀ ಮುಕಾಂಬಿಕ ಯಕ್ಷಗಾನ ತರಬೇತಿ ಕೇಂದ್ರದ ಕಲಾವಿದರಿಂದ ‘ಸಿರಿ ಕೃಷ್ಣ ಚಂದಪಾಲಿ’ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ಪುತ್ತೂರು ಜಗದೀಶ್ ಆಚಾರ್ಯ ಅವರ ಸಾರಥ್ಯದಲ್ಲಿ ‘ಸಂಗೀತ ಗಾನ ಸಂಭ್ರಮ’ ಭಕ್ತಿಗೀತೆಗಳ ಸಂಗೀತ ರಸಮಂಜರಿ ನಡೆಯಲಿದೆ ಎಂದರು .

ಸೆ.15ರಂದು ಬೆಳಿಗ್ಗೆ 7.30ಕ್ಕೆ 108 ತೆಂಗಿನಕಾಯಿಯ ಮಹಾಗಣಯಾಗ ನಡೆಯಲಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಪಾಂಚಜನ್ಯ ಪ್ರತಿಷ್ಠಾನ ಕುಡ್ಲದ ಕಲಾವಿದರಿಂದ ‘ಮಂಗಳಾಪುರದ ಮಂಗಳಾಂಬೆ’ ಭಕ್ತಿ ಪ್ರಧಾನ ಪೌರಾಣಿಕ ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದರು .
ಸಂಜೆ 3.30ಕ್ಕೆ ಸಮಾರೋಪ ಸಮಾರಂಭದ ಧಾರ್ಮಿಕ ಸಭೆ ನಡೆಯಲಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಉಪಸ್ಥಿತರಿರುವರು. ಸಂಜೆ 5 ಗಂಟೆಗೆ ವಿವಿಧ ಕುಣಿತ ಭಜನೆ, ಚಂಡೆ ಹಾಗೂ ವಾದ್ಯಗಳೊಂದಿಗೆ ಶ್ರೀ ವಿಶ್ವೇಶ್ವರ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 11 ಗಂಟೆಗೆ ಕಡೆಕಾರ್ ನೇತ್ರಾವತಿ ನದಿ ತೀರದಲ್ಲಿ ಜಲಾಧಿವಾಸ ನಡೆಯಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಸುಧಾಕರ ಜೆ. ಹಾಗೂ ಶ್ರೀಧರ್‌ರಾಜ್ ಶೆಟ್ಟಿ, ಉದಯಕುಮಾರ್ ಕೊಟ್ಟಾರಿ, ಗಣೇಶ್ ಶೆಟ್ಟಿ ಕಂರ್ಬೆಟ್ಟು, ಬಾಲಕೃಷ್ಣ ಹೆಗ್ಡೆ, ಪ್ರಧಾನ ಕೋಶಾಧಿಕಾರಿ ಶೈಲೇಶ್ ಭಂಡಾರಿ ಸಹಿತ ಮತಿತ್ತರರು ಉಪಸ್ಥಿತರಿದ್ದರು .

