ಯುವಜನರು ವಿಕಸಿತ ಭಾರತಕ್ಕಾಗಿ ತಮ್ಮ ಆಲೋಚನೆಗಳನ್ನು ರಾಷ್ಟ್ರಮಟ್ಟಕ್ಕೆ ತಲುಪಿಸಲಿ

ಮಂಗಳೂರು: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಜ.12ರಂದು ನಡೆಯುವ ರಾಷ್ಟ್ರೀಯ ಯುವಜನೋತ್ಸವವನ್ನು ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್’ ಹೆಸರಿನಲ್ಲಿ ಆಯೋಜಿಸಲಾಗುತ್ತಿದ್ದು, 15ರಿಂದ 29 ವರ್ಷದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮೈ ಭಾರತ್ ಜಿಲ್ಲಾ ಡೆಪ್ಯೂಟಿ ಡೈರೆಕ್ಟರ್ ಉಲ್ಲಾಸ್ ಮನವಿ ಮಾಡಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರ ಪ್ರತಿಭೆ, ಜ್ಞಾನ, ಸೃಜನಶೀಲತೆ ಹಾಗೂ ವಿಕಸಿತ ಭಾರತದ ಕುರಿತಾದ ಆಲೋಚನೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ವಿವಿಧ ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

‘ವಿಕಸಿತ ಭಾರತ ಚಾಲೆಂಜಸ್ ಟ್ರ್ಯಾಕ್’, ಸಾಂಸ್ಕೃತಿಕ ವಿಭಾಗ, ‘ಇನ್ನೊವೇಷನ್ ಫಾರ್ ಭಾರತ್’, ‘ಡಿಸೈನ್ ಫಾರ್ ಭಾರತ್’, ‘ಹ್ಯಾಕ್ ಆಫ್ ಸೋಷಿಯಲ್ ಕಾಸ್’ ಹಾಗೂ ಈ ವರ್ಷದಿಂದ ಆರಂಭವಾಗಿರುವ ‘ಯೂತ್ ಎಂಟರ್‌ಪ್ರೆನ್ಯೂರ್‌ಶಿಪ್ ಚಾಲೆಂಜ್’ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಯುವಜನರಿಗೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ 15ರಿಂದ 29 ವರ್ಷದ ಯುವಜನರಿಗೆ ಸಂಸತ್‌ನಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸುವ ರಾಷ್ಟ್ರೀಯ ಯುವ ಸಂಸತ್ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.

‘ವಿಕಸಿತ ಭಾರತ ಚಾಲೆಂಜಸ್ ಟ್ರ್ಯಾಕ್’ನಡಿ ಜಿಲ್ಲಾಮಟ್ಟದ ಕ್ವಿಜ್ ಸ್ಪರ್ಧೆ ಈಗಾಗಲೇ ಆರಂಭಗೊಂಡಿದ್ದು, ಸೆ.30 ನೋಂದಣಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಕೊನೆಯ ದಿನವಾಗಿದೆ. ಮೈ ಭಾರತ್ ಪೋರ್ಟಲ್ ಮೂಲಕ ಯುವಜನರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕ್ವಿಜ್‌ನಲ್ಲಿ ಉತ್ತಮ ಸಾಧನೆ ಮಾಡುವ ಶೇ.10ರಷ್ಟು ಸ್ಪರ್ಧಿಗಳನ್ನು ಮುಂದಿನ ಹಂತದ ಪ್ರಬಂಧ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಬಳಿಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿವಿಧ ವಿಷಯಗಳ ಕುರಿತು ಪ್ರಸ್ತುತಿ ನೀಡುವ ಅವಕಾಶ ದೊರೆಯಲಿದ್ದು, ಅಲ್ಲಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆ ನಡೆಯಲಿದೆ ಎಂದರು.

ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗುವ ಯುವಜನರಿಗೆ ತಮ್ಮ ಆಲೋಚನೆ, ದೃಷ್ಟಿಕೋನ ಹಾಗೂ ವಿಕಸಿತ ಭಾರತದ ಕುರಿತಾದ ಪರಿಕಲ್ಪನೆಗಳನ್ನು ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಯವರ ಮುಂದೆ ಮಂಡಿಸುವ ಮಹತ್ವದ ಅವಕಾಶ ದೊರೆಯಲಿದೆ. ಕಳೆದ ವರ್ಷ ಕರ್ನಾಟಕದ ಯುವ ಪ್ರತಿನಿಧಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಯುವಜನರು ರಾಷ್ಟ್ರಮಟ್ಟ ತಲುಪಿ ಜಿಲ್ಲೆಯ ಹೆಸರನ್ನು ಬೆಳಗಿಸಬೇಕು ಎಂದು ಉಲ್ಲಾಸ್ ಮನವಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದು, ಇಲ್ಲಿನ ಯುವಜನರಲ್ಲಿ ಅಪಾರ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆ ಇದೆ. ಈ ಪ್ರತಿಭೆಯನ್ನು ರಾಷ್ಟ್ರಮಟ್ಟಕ್ಕೆ ತಲುಪಿಸಲು ಜಿಲ್ಲೆಯ ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಯುವಕ–ಯುವತಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಮೂಲಕ ಯುವಜನರಿಗೆ ತಮ್ಮ ಪ್ರತಿಭೆ ಮತ್ತು ಆಲೋಚನೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಲು ಉತ್ತಮ ವೇದಿಕೆ ದೊರೆಯಲಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರನ್ನು ಭಾಗವಹಿಸುವಂತೆ ಮಾಡಲು ಎನ್‌ಎಸ್‌ಎಸ್, ಎನ್‌ಸಿಸಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌ಎಸ್‌ಎಸ್ ನೋಡೆಲ್ ಅಧಿಕಾರಿ ಸೀಮಾ ಹಾಗೂ ಆಡಳಿತಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

SHARE
Loading spinner

2 thoughts on “ಯುವಜನರು ವಿಕಸಿತ ಭಾರತಕ್ಕಾಗಿ ತಮ್ಮ ಆಲೋಚನೆಗಳನ್ನು ರಾಷ್ಟ್ರಮಟ್ಟಕ್ಕೆ ತಲುಪಿಸಲಿ

Leave a Reply

Your email address will not be published. Required fields are marked *

error: Content is protected !!