ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗೆ ಎಸಿಸಿಇ ಗೌರವ ಫೆಲೋಶಿಪ್

ಮಂಗಳೂರು: ಎಂಜಿನಿಯರಿಂಗ್, ಶಿಕ್ಷಣ ಸಂಸ್ಥೆಗಳ ನಿರ್ಮಾಣ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ (ಎಸಿಸಿಇ–ಇಂಡಿಯಾ) ವತಿಯಿಂದ ಗೌರವ ಫೆಲೋಶಿಪ್ ಪ್ರದಾನ ಮಾಡಲಾಗುವುದು ಎಂದು ಎಸಿಸಿಇ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ತಿಳಿಸಿದ್ದಾರೆ.

ಮಂಗಳವಾರ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.17ರಂದು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿರುವ ಎಂಜಿನಿಯರ್ಸ್‌ ಡೇ ಆಚರಣೆಯ ಸಂದರ್ಭದಲ್ಲಿ ಫೆಲೋಶಿಪ್ ಪ್ರದಾನ ಮಾಡಲಾಗುವುದು. ಬೆಂಗಳೂರು ನಗರಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಫೆಲೋಶಿಪ್ ಪ್ರದಾನಿಸಲಿದ್ದಾರೆ ಎಂದರು.

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಸೆ.15ರಂದು ದೇಶಾದ್ಯಂತ ಎಂಜಿನಿಯರ್ಸ್‌ ಡೇ ಆಚರಿಸಲಾಗುತ್ತದೆ. ಎಸಿಸಿಇ(ಐ) ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಪ್ರಶಸ್ತಿ ಹಾಗೂ ಗೌರವದ ಮೂಲಕ ಸಮ್ಮಾನಿಸಲಾಗುತ್ತದೆ. ಎಂಜಿನಿಯರ್ಸ್‌ ಡೇ ಪ್ರಶಸ್ತಿ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಯುವ ಎಂಜಿನಿಯರ್ ಪ್ರಶಸ್ತಿ ಪ್ರಮುಖವಾಗಿವೆ. ಈ ಹಿಂದೆ ಮಾಜಿ ಪ್ರಧಾನಿ ಹಾಗೂ ಸಿವಿಲ್ ಎಂಜಿನಿಯರ್ ಎಚ್.ಡಿ. ದೇವೇಗೌಡ ಅವರಿಗೂ ಎಸಿಸಿಇ(ಐ) ವತಿಯಿಂದ ಗೌರವ ಫೆಲೋಶಿಪ್ ಪ್ರದಾನ ಮಾಡಲಾಗಿದೆ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ಗೌರವ ಫೆಲೋಶಿಪ್ ನೀಡುತ್ತಿರುವುದು ಎಂಜಿನಿಯರಿಂಗ್ ವಲಯಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಎಂಜಿನಿಯರಿಂಗ್ ಜ್ಞಾನ, ಶಿಕ್ಷಣ, ನಾಯಕತ್ವ ಮತ್ತು ಸಮಾಜಸೇವೆಯ ಸಾರ್ಥಕ ಸಂಯೋಜನೆಗೆ ಸಲ್ಲಿಸುತ್ತಿರುವ ಗೌರವವಾಗಿದೆ ಎಂದು ರಾಜೇಂದ್ರ ಕಲ್ಬಾವಿ ಹೇಳಿದರು.

ಮಂಗಳೂರಿನಲ್ಲಿ ಸೆ.19ರಂದು ರೆಡ್‌ಕ್ರಾಸ್‌ ಭವನದಲ್ಲಿ ಎಂಜಿನಿಯರ್ಸ್‌ ಡೇ ಆಚರಣೆ ನಡೆಯಲಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಎಂಜಿನಿಯರ್‌ಗಳನ್ನು ಸಮ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಘಟಕದ ಅಧ್ಯಕ್ಷ ಅರುಣ್ ರಾಜ್, ಪ್ರಮುಖರಾದ ವಿಜಯ್ ವಿಷ್ಣುಮಯ್ಯ, ಸುಬ್ರಹ್ಮಣ್ಯ ಪ್ರಭು, ಚೆನ್ನಗಿರಿ ಗೌಡ, ಉಜ್ವಲ್ ಡಿಸೋಜಾ ಹಾಗೂ ಭರತ್ ಜೈನ್ ಉಪಸ್ಥಿತರಿದ್ದರು.

SHARE
Loading spinner

One thought on “ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗೆ ಎಸಿಸಿಇ ಗೌರವ ಫೆಲೋಶಿಪ್

Leave a Reply

Your email address will not be published. Required fields are marked *

error: Content is protected !!