ಕೊಂಕಣಿ ಸಮುದಾಯಗಳ ಒಗ್ಗೂಡಿಸುವಿಕೆಗೆ ‘ಕೊಂಕನಿಜ್’ ವೇದಿಕೆ; ಸೆ.18ರಂದು ‘ನಾಚೋಂ ಯಾ ಕುಂಪಸಾರ್’ ಚಿತ್ರ ಪ್ರದರ್ಶನ

ಮಂಗಳೂರು:ವಿಶ್ವದಾದ್ಯಂತ ಹರಡಿರುವ ಕೊಂಕಣಿ ಮಾತನಾಡುವ ಸಮುದಾಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ‘ಕೊಂಕನಿಜ್’ (KONKANIZ) ಎಂಬ ಸಮುದಾಯ ಆಧಾರಿತ ವೇದಿಕೆಯನ್ನು ಮಂಗಳೂರಿನಲ್ಲಿ ಆರಂಭಿಸಲಾಗಿದೆ ಎಂದು ಮೆಂಡೋನ್ಸಾ ಫೌಂಡೇಶನ್‌ನ ಡಾ. ವಿವೇಕ್ ಮಂಡೋನ್ಸಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕೊಂಕಣಿ ಸಮುದಾಯಗಳ ನಡುವಿನ ಭಾಷಾ ಉಪಭಾಷೆಗಳು, ವಿವಿಧ ಲಿಪಿಗಳು ಹಾಗೂ ಭೌಗೋಳಿಕ ಗಡಿಗಳಿಂದ ಉಂಟಾಗಿರುವ ಅಂತರವನ್ನು ಕಡಿಮೆ ಮಾಡಿ, ಸಾಮಾನ್ಯ ಸಾಂಸ್ಕೃತಿಕ ಬಂಧವನ್ನು ಬಲಪಡಿಸುವುದು ವೇದಿಕೆಯ ಉದ್ದೇಶವಾಗಿದೆ. ಕೊಂಕಣಿ ಭಾಷೆ, ಆಹಾರ, ಸಂಗೀತ, ನೃತ್ಯ, ಚಲನಚಿತ್ರ, ಕ್ರೀಡೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮೂಲಕ ಸಮುದಾಯಗಳ ನಡುವೆ ಸೇತುವೆ ನಿರ್ಮಿಸಲು ವೇದಿಕೆ ಕಾರ್ಯನಿರ್ವಹಿಸಲಿದೆ ಎಂದರು.

ಈ ಆಶಯದ ಭಾಗವಾಗಿ ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕೊಂಕಣಿ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿರುವ ‘ನಾಚೋಂ ಯಾ ಕುಂಪಸಾರ್’ ಕೊಂಕಣಿ ಚಲನಚಿತ್ರವನ್ನು ಸೆ.18ರಂದು ಶುಕ್ರವಾರ ಮಧ್ಯಾಹ್ನ 3.45ಕ್ಕೆ ವಿಶ್ವವಿದ್ಯಾಲಯದ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಪ್ರದರ್ಶಿಸಲಾಗುವುದು. ಪ್ರೊ. ಫ್ಲೋರಾ ಕ್ಯಾಸ್ಟಲಿನೊ ಅವರ ನೇತೃತ್ವದಲ್ಲಿ ರೆಕ್ಸ್ ಫರ್ನಾಂಡಿಸ್ ಹಾಗೂ ಚಿತ್ರದ ನಿರ್ದೇಶಕ, ಲೇಖಕ ಮತ್ತು ನಿರ್ಮಾಪಕ ಬಾಡ್ರಾಯ್ ಬ್ಯಾರೆಟ್ಟೊ ಅವರ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.

ಗೋವಾ ಫೋಕ್‌ಲೋರ್ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ನಾಚೋಂ ಯಾ ಕುಂಪಸಾರ್’ ಚಿತ್ರವು 24 ಅಂತಾರಾಷ್ಟ್ರೀಯ ಗೌರವಗಳು, ಮೂರು ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ 10 ಗೋವಾ ರಾಜ್ಯ ಪ್ರಶಸ್ತಿಗಳನ್ನು ಪಡೆದಿದೆ. 1960–70ರ ದಶಕದ ಗೋವಾದ ಸಂಗೀತ ಲೋಕವನ್ನು ಹಿನ್ನೆಲೆಯಾಗಿಟ್ಟುಕೊಂಡಿರುವ ಈ ಚಿತ್ರವು ಕೊಂಕಣಿ ಸಂಗೀತದ ಶ್ರೀಮಂತ ಪರಂಪರೆ ಹಾಗೂ ಆ ಕಾಲದ ಸಂಗೀತಗಾರರ ಬದುಕನ್ನು ಪರಿಚಯಿಸುತ್ತದೆ.

ಗೋವಾ ಮತ್ತು ಕರ್ನಾಟಕದ ನಡುವಿನ ಭಾಷಾ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವೂ ಚಿತ್ರ ಪ್ರದರ್ಶನದ ಹಿಂದಿದೆ. ಮುಂದಿನ ದಿನಗಳಲ್ಲಿ ಎರಡೂ ರಾಜ್ಯಗಳ ನಡುವೆ ಚಲನಚಿತ್ರ, ನಾಟಕ, ಸಂಗೀತ, ನೃತ್ಯ, ಆಹಾರ ಉತ್ಸವ, ಸಾಹಿತ್ಯ, ಪರಂಪರೆ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಡಾ. ವಿವೇಕ್ ಮಂಡೋನ್ಸಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ರೆಕ್ಸ್ ಫರ್ನಾಂಡಿಸ್, ಆಂಟೋನಿಯೋ ಫರ್ನಾಂಡಿಸ್, ಟೈಟಸ್ ನೊರೊನ್ಹಾ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

SHARE
Loading spinner

2 thoughts on “ಕೊಂಕಣಿ ಸಮುದಾಯಗಳ ಒಗ್ಗೂಡಿಸುವಿಕೆಗೆ ‘ಕೊಂಕನಿಜ್’ ವೇದಿಕೆ; ಸೆ.18ರಂದು ‘ನಾಚೋಂ ಯಾ ಕುಂಪಸಾರ್’ ಚಿತ್ರ ಪ್ರದರ್ಶನ

Leave a Reply

Your email address will not be published. Required fields are marked *

error: Content is protected !!