ಮಂಗಳೂರು: ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪದ್ಮರಾಜ್ ಆರ್. ಪೂಜಾರಿ ಅವರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಲೋಕದ ಹಿತ, ಜನರ ಸುಖ–ಶಾಂತಿ ಹಾಗೂ ಸಮಾಜದ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಪದ್ಮರಾಜ್ ಆರ್. ಪೂಜಾರಿ ಅವರು, ಜನಸೇವೆಯ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ದೊರೆತಿರುವುದು ಸಂತೋಷದ ಸಂಗತಿ. ದೇವರ ಸೇವೆ ಹಾಗೂ ಜನರ ಸೇವೆಗೆ ಅವಕಾಶ ದೊರೆತಿರುವುದು ತಮ್ಮ ಭಾಗ್ಯವಾಗಿದ್ದು, ಜನರು ನೀಡುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಕ್ಕೆ ಸದಾ ಕೃತಜ್ಞರಾಗಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿನಾಥ್ ಜೋಗಿ, ನಾರಾಯಣ ಕೋಟ್ಯಾನ್, ದಿಲ್‌ರಾಜ್ ಆಳ್ವ, ಕಿರಣ್ ಕುಮಾರ್, ರಾಜೇಂದ್ರ ಚಿಲಿಂಬಿ, ಉಷಾ ಪ್ರಭಾಕರ್, ಪ್ರೀತಾನಂದನ್, ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ, ಟಿಪೇಶ್ ಎಸ್. ಅಮೀನ್, ಮೋಹನ್ ಕೊಪ್ಪಳ, ರಾಜೇಶ್ ದೇವಾಡಿಗ, ಜಗದೀಶ್ ಕದ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

