ಕರಾವಳಿ ಯೋಜನೆಗಳ ಅನುಷ್ಠಾನಕ್ಕೆ ಅನುದಾನದ ಕೊರತೆ ಆಗದು: ಯು.ಟಿ.ಖಾದರ್

ಮಂಗಳೂರು, ಸೆ.28: ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಘೋಷಿಸಲಾಗಿರುವ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಅನುದಾನದ ಕೊರತೆಯಾಗುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಆರ್ಥಿಕ ಇಲಾಖೆ ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಮಾಹಿತಿ ನೀಡುವುದು ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಆದರೆ ಸಚಿವ ಸಂಪುಟದಲ್ಲಿ ಘೋಷಿಸಲಾದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮುಖ್ಯಮಂತ್ರಿ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ. ಯೋಜನೆಗಳನ್ನು ಯಾವ ರೀತಿಯಲ್ಲಿ ಮತ್ತು ಯಾವ ಹಂತದಲ್ಲಿ ಅನುಷ್ಠಾನಗೊಳಿಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದರು.

ಬಿಜೆಪಿಯವರು ತಮ್ಮ ಅವಧಿಯಲ್ಲಿ ಏನು ಮಾಡಿದ್ದಾರೆ ಹಾಗೂ ಮುಂದೇನು ಮಾಡಲಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಕನಿಷ್ಠ ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದಾರೆಯೇ? ಯಾವುದಾದರೂ ಹೊಸ ನೀತಿಯನ್ನು ಜಾರಿಗೊಳಿಸಿದ್ದಾರೆಯೇ ಎಂದು ಖಾದರ್ ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಯೋಜನೆಗಳನ್ನು ಈಡೇರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ತುಳು ಭಾಷೆಗೆ ಮಾನ್ಯತೆ ನೀಡುವ ವಿಚಾರದಲ್ಲಿ ಡಾ. ಎಂ. ಮೋಹನ್ ಆಳ್ವ ನೇತೃತ್ವದ ತಂಡ ನೀಡಿದ್ದ ವರದಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಇತ್ತು. ಆಗ ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ವರದಿ ಕೈಯಲ್ಲಿದ್ದು, ಸಹಿ ಹಾಕುವುದು ಮಾತ್ರ ಬಾಕಿಯಿತ್ತು. ಅದಕ್ಕೆ ಧೈರ್ಯ ಬೇಕಿತ್ತು. ಆ ಧೈರ್ಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೋರಿಸಿದ್ದಾರೆ ಎಂದು ಹೇಳಿದರು.

ಸುಮ್ಮನೆ ಆರೋಪ ಮಾಡುತ್ತಾ ಹೋದರೆ ಜಿಲ್ಲೆಯ ಜನರು ಕ್ಷಮಿಸುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಶ್ರಮಜೀವಿಗಳಾಗಿದ್ದು, ಹೆಂಚು, ಗೇರು ಹಾಗೂ ಧಕ್ಕೆಯಲ್ಲಿ ದುಡಿದು ಬದುಕು ಕಟ್ಟಿಕೊಂಡವರು. ಉಪಕಾರ ಮಾಡಿದವರನ್ನು ಅವರು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಜನತೆ ಅದನ್ನು ತೋರಿಸಿಕೊಡಲಿದ್ದಾರೆ. ರಾಜಕೀಯ ಆರೋಪ ಮಾಡುವ ಬದಲು ತಮ್ಮ ಅವಧಿಯಲ್ಲಿ ಏನು ಮಾಡಿದ್ದಾರೆ, ಮುಂದೇನು ಮಾಡಲಿದ್ದಾರೆ ಎಂಬುದನ್ನು ಬಿಜೆಪಿ ನಾಯಕರು ಹೇಳಲಿ ಎಂದು ಖಾದರ್ ಸವಾಲು ಹಾಕಿದರು.

ಬಿಜೆಪಿಯವರಿಗೆ ಯಾವುದೇ ಯೋಜನೆ ಅನುಷ್ಠಾನಗೊಳ್ಳುವುದು ಬೇಡವಾಗಿದೆ. ಯೋಜನೆ ಘೋಷಣೆಯಾಗಿ ಕನಿಷ್ಠ ಆರರಿಂದ ಒಂದು ವರ್ಷವಾದರೂ ಜಾರಿಯಾಗದಿದ್ದರೆ ಟೀಕೆ ಮಾಡಬಹುದು. ಆದರೆ ಸಚಿವ ಸಂಪುಟ ಸಭೆ ನಡೆಯುವ ಮೊದಲೇ ಶಾಸಕ ವೇದವ್ಯಾಸ ಕಾಮತ್ ಚೊಂಬು ಖರೀದಿಸಿ ಮನೆಯಲ್ಲಿ ಇಟ್ಟಿದ್ದರೆ ಏನು ಮಾಡುವುದು ಎಂದು ಖಾದರ್ ವ್ಯಂಗ್ಯವಾಡಿದರು.

ಪಿಪಿಪಿ ಮಾದರಿಯಲ್ಲಿ ಯೋಜನೆಗಳ ಅನುಷ್ಠಾನವಾದರೂ ಅವುಗಳ ನಿಯಂತ್ರಣ ಸರ್ಕಾರದ ಬಳಿಯೇ ಇರಲಿದೆ. ಯಾವುದೇ ಬೃಹತ್ ಯೋಜನೆಗಳನ್ನು ಜಾರಿಗೊಳಿಸಿದಾಗ ಅದರ ನಿರ್ವಹಣೆಗೆ ಸರ್ಕಾರ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳನ್ನು ನೇಮಿಸುವುದು ಸಾಮಾನ್ಯ ಪ್ರಕ್ರಿಯೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಮೌಖಿಕ ಒಪ್ಪಿಗೆ ದೊರೆತಿದೆ ಎಂದು ಖಾದರ್ ತಿಳಿಸಿದರು. ಕೆಸಿಸಿಐ, ಸಣ್ಣ ಕೈಗಾರಿಕೆಗಳ ಪ್ರತಿನಿಧಿಗಳು, ಕ್ರೆಡೈ ಸೇರಿದಂತೆ ವಿವಿಧ ಸಂಘಟನೆಗಳು ‘ಮಂಗಳೂರು’ ಹೆಸರಿಡುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿವೆ. ಆದರೆ ಜನರ ಬಹುಮತದ ಭಾವನೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಒಂದು ತಿಂಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಆಕ್ಷೇಪಣೆ ಸಲ್ಲಿಕೆಗೆ ಕರಡು ಅಧಿಸೂಚನೆ ಹೊರಡಿಸುವ ಕುರಿತು ಪರಿಶೀಲಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಮೂಲಕವೂ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಮೆಲ್ವಿನ್ ಹಾಗೂ ಮುಖಂಡರಾದ ಸಲೀಂ ಮತ್ತು ಇಕ್ಬಾಲ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!