SIR ತಕ್ಷಣ ಸ್ಥಗಿತಗೊಳಿಸಿ: ನಟ ಪ್ರಕಾಶ್ ರಾಜ್ ಆಗ್ರಹ

ಮಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ಹಿಂದಿನ ಅಧಿಕೃತ ಮತದಾರರ ಪಟ್ಟಿಯನ್ನು ಆಧಾರವಾಗಿಸಿಕೊಂಡು ಅರ್ಹ ಮತದಾರರ ಹಕ್ಕುಗಳನ್ನು ಮರುಸ್ಥಾಪಿಸಬೇಕು ಎಂದು ನಟ ಪ್ರಕಾಶ್ ರಾಜ್ ಆಗ್ರಹಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, SIR ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡುವ ಆತಂಕ ಎದುರಾಗಿದೆ ಎಂದು ಹೇಳಿದರು. ಈ ಹೋರಾಟ ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧದಲ್ಲಲ್ಲ. ಇದು ಮತದಾರರ ಹಕ್ಕಿನ ಪ್ರಶ್ನೆ ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗವು ಈ ಹಿಂದೆ ವರ್ಷಪೂರ್ತಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ವ್ಯವಸ್ಥೆ ಹೊಂದಿತ್ತು. BLOಗಳು ಮನೆಮನೆಗೆ ತೆರಳಿ ಹೊಸ ಮತದಾರರ ಸೇರ್ಪಡೆ, ಮೃತಪಟ್ಟವರ ಹೆಸರು ತೆರವು, ವಿಳಾಸ ಬದಲಾವಣೆ ಸೇರಿದಂತೆ ಅಗತ್ಯ ತಿದ್ದುಪಡಿಗಳನ್ನು ಮಾಡುತ್ತಿದ್ದರು. ಆದರೆ SIR ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ ಎನ್ಯುಮರೇಷನ್ ಫಾರ್ಮ್‌ಗಳ ಮೂಲಕ ದೊಡ್ಡ ಪ್ರಮಾಣದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪ್ರಕಾಶ್ ರಾಜ್ ಹೇಳಿದರು. SIR ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡದೆ, ಅಲ್ಪಾವಧಿಯಲ್ಲಿ ಕೋಟ್ಯಂತರ ಮತದಾರರ ವಿವರಗಳನ್ನು ಪರಿಶೀಲಿಸುವ ಕ್ರಮ ಕೈಗೊಳ್ಳಲಾಗಿದೆ ಎಂಬುದು ತಮ್ಮ ಪ್ರಮುಖ ಆಕ್ಷೇಪ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಸುಮಾರು 5.5 ಕೋಟಿ ಮತದಾರರಿದ್ದು, SIR ಬಳಿಕ 1.08 ಕೋಟಿ ಮತದಾರರನ್ನು ‘ASDTO’ (Absent, Shifted, Duplicate, Dead, Others) ವಿಭಾಗದಲ್ಲಿ ಗುರುತಿಸಲಾಗಿದೆ ಹಾಗೂ 43 ಲಕ್ಷ ಮತದಾರರನ್ನು ‘Unmapped Logical Discrepancy’ ಎಂದು ಗುರುತಿಸಲಾಗಿದೆ ಎಂದು ಪ್ರಕಾಶ್ ರಾಜ್ ಹೇಳಿದರು. ಈ ಪೈಕಿ ಸುಮಾರು 23 ಲಕ್ಷ ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಸೆ.1ರಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ, ಮತದಾರರಿಗೆ ತಮ್ಮ ದಾಖಲೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರೂ ಸಮರ್ಪಕ ಸ್ಪಂದನೆ ದೊರೆಯಲಿಲ್ಲ ಎಂದು ಆರೋಪಿಸಿದರು.

SIR ಪ್ರಕ್ರಿಯೆಯಲ್ಲಿ ಜೀವಂತವಾಗಿರುವವರನ್ನೇ ಮೃತಪಟ್ಟವರು ಎಂದು ಗುರುತಿಸಿರುವುದು, ಹಲವು ವರ್ಷಗಳಿಂದ ಅದೇ ಮನೆಯಲ್ಲಿ ವಾಸಿಸುತ್ತಿರುವವರನ್ನು ‘Absent’ ಎಂದು ನಮೂದಿಸಿರುವುದು ಹಾಗೂ ವಿಳಾಸ ಬದಲಾವಣೆಯ ಕಾರಣಕ್ಕೆ ‘Shifted’ ಎಂದು ಗುರುತಿಸಿರುವಂತಹ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿವೆ ಎಂದು ಪ್ರಕಾಶ್ ರಾಜ್ ಹೇಳಿದರು. ದಕ್ಷಿಣ ಕನ್ನಡದ ಮಹಾಲಿಂಗಪ್ಪ ಎಂಬವರು ತಾವು ಬದುಕಿದ್ದರೂ ಮತದಾರರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ನಮೂದಿಸಿರುವುದನ್ನು ಪ್ರಶ್ನಿಸಿರುವ ಉದಾಹರಣೆಯನ್ನೂ ಅವರು ನೀಡಿದರು. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ವೃದ್ಧರು ಸೇರಿದಂತೆ ಹಲವರು ಆತಂಕಕ್ಕೊಳಗಾಗಿದ್ದಾರೆ ಎಂದು ಅವರು ಹೇಳಿದರು.

ಈ ಕುರಿತು ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 100 ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡು ಸಾಮಾಜಿಕ ಪರಿಶೋಧನೆ ನಡೆಸಲಾಗುತ್ತಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಪ್ರಕರಣಗಳನ್ನು ದಾಖಲೆಗಳು ಮತ್ತು ಸಾಕ್ಷ್ಯಗಳೊಂದಿಗೆ ಸಂಗ್ರಹಿಸಲಾಗುತ್ತಿದೆ. ಸೆ.30ರಂದು ಈ ದಾಖಲೆಗಳನ್ನು ಮಾಧ್ಯಮಗಳು ಹಾಗೂ ಸರ್ಕಾರದ ಮುಂದಿಡಲು ಉದ್ದೇಶಿಸಲಾಗಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು. ಬಳಿಕ ಅ.1ರಂದು ದೆಹಲಿಯಲ್ಲಿ ವಿವಿಧ ರಾಜ್ಯಗಳ SIR ಸಂತ್ರಸ್ತರು ಹಾಗೂ ಸಂಘಟನೆಗಳೊಂದಿಗೆ ರಾಷ್ಟ್ರೀಯ ಮಟ್ಟದ ಪತ್ರಿಕಾಗೋಷ್ಠಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

SIR ಪ್ರಕ್ರಿಯೆಯಲ್ಲಿ ನೋಟಿಸ್, ದಾಖಲೆ ಸಲ್ಲಿಕೆ ಹಾಗೂ ಮತದಾರರ ಹೆಸರು ಮರುಸ್ಥಾಪನೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಪ್ರಕಾಶ್ ರಾಜ್ ಹೇಳಿದರು. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೊದಲು ನಿಯಮಾನುಸಾರ ನೋಟಿಸ್ ನೀಡಬೇಕೆಂಬ ಅಂಶವನ್ನು ಅವರು ಪ್ರಸ್ತಾಪಿಸಿದರು. ಚುನಾವಣಾ ಆಯೋಗದ ನಿರ್ಧಾರಗಳು, ನಿಯಮಗಳು ಮತ್ತು ಪ್ರಕ್ರಿಯೆಗಳ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕು ಎಂದು ಅವರು ಆಗ್ರಹಿಸಿದರು. SIR ಪ್ರಕ್ರಿಯೆಯ ಬಗ್ಗೆ ಪಾರದರ್ಶಕತೆ ಮತ್ತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಅಗತ್ಯವಿದೆ ಎಂದು ಒತ್ತಾಯಿಸಿದರು.

ಅರ್ಹ ಮತದಾರರೊಬ್ಬರಿಗೂ ಮತದಾನದ ಹಕ್ಕು ಕಳೆದುಹೋಗಬಾರದು ಎಂಬುದೇ ತಮ್ಮ ಹೋರಾಟದ ಉದ್ದೇಶ ಎಂದು ಪ್ರಕಾಶ್ ರಾಜ್ ಹೇಳಿದರು. SIR ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಹಿಂದಿನ ಅಧಿಕೃತ ಮತದಾರರ ಪಟ್ಟಿಯನ್ನು ಆಧಾರವಾಗಿ ಪಡೆದು ಅಗತ್ಯ ತಿದ್ದುಪಡಿಗಳನ್ನು ಪಾರದರ್ಶಕವಾಗಿ ನಡೆಸಬೇಕು. ಮತದಾರರ ಹಕ್ಕುಗಳನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ಕುರಿತು ಸರ್ಕಾರ, ಚುನಾವಣಾ ಆಯೋಗ ಹಾಗೂ ಸಂಬಂಧಿಸಿದ ಸಂಸ್ಥೆಗಳು ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ SIR ವಿರೋಧಿ ಒಕ್ಕೂಟದ ಪ್ರಮುಖರಾದ ಕೆ ಎಲ್ ಅಶೋಕ್, ಅಬ್ದುಲ್ ಮಜೀದ್‌ ಮೈಸೂರು ಸಹಿತ ಮತ್ತಿತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!