ಅ.13ರಂದು ಡಿಕೆಎಸ್‌ಸಿ ಸಂಸ್ಥಾಪನಾ ದಿನಾಚರಣೆ; ಅ.1ರಿಂದ ತಿಂಗಳಾದ್ಯಂತ ವಿವಿಧ ಕಾರ್ಯಕ್ರಮ

ಮಂಗಳೂರು, ಸೆ.28: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಎಸ್‌ಸಿ) ವತಿಯಿಂದ ಅ.13ರಂದು ಸಂಸ್ಥಾಪನಾ ದಿನಾಚರಣೆ ನಡೆಯಲಿದ್ದು, ಇದರ ಅಂಗವಾಗಿ ಅ.1ರಿಂದ 31ರವರೆಗೆ ವಿವಿಧ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಸಮಿತಿ ಪ್ರಕಾರ್ಯದರ್ಶಿ ಇಸಾಕ್ ಬೊಳ್ಳಾಯಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1995ರಲ್ಲಿ ಆರಂಭಗೊಂಡ ಡಿಕೆಎಸ್‌ಸಿ ಪ್ರಸ್ತುತ 13 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಸಂಸ್ಥೆಯ ಅಲ್ ಇಹ್ವಾನ್ ಶಿಕ್ಷಣ ಕೇಂದ್ರದಲ್ಲಿ 2,500ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 250ಕ್ಕೂ ಅಧಿಕ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದಲ್ಲಿ ರಾಜ್ಯಮಟ್ಟದ 4ನೇ ಮತ್ತು 6ನೇ ರ‍್ಯಾಂಕ್ ಪಡೆದಿರುವುದು ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿದೆ ಎಂದರು.

ಆರೋಗ್ಯ ತಪಾಸಣೆ, ರಕ್ತದಾನ, ಹಿಜಾಮ ಚಿಕಿತ್ಸೆ, ಮಾದಕ ವ್ಯಸನ ವಿರೋಧಿ ಜಾಗೃತಿ, ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆ ನಡೆಸುತ್ತಿದೆ. ಮುಡಿಪು ಸಮೀಪ 12 ಎಕರೆ ಜಾಗದಲ್ಲಿ ಕಾನೂನು, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ಒಳಗೊಂಡ ‘ಅಲ್ ಇನ್ಸಾನ್ ಯುನಿವರ್ಸಿಟಿ’ ಸ್ಥಾಪಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.

ಅ.1ರಂದು ಝಿಯಾರತ್‌ನೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, 33 ಮಹಲ್‌ಗಳ ಸಂದರ್ಶನ, ಮನೆ-ಮನೆ ಭೇಟಿ, ಸದಸ್ಯತ್ವ ಅಭಿಯಾನ, ಆಹಾರ ಸಾಮಗ್ರಿ ಸಂಗ್ರಹ, ಧ್ವಜಾರೋಹಣ, ಸಾಮೂಹಿಕ ಮುಂಜಿ, ಉಚಿತ ಹಿಜಾಮ, ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಗಳು ನಡೆಯಲಿವೆ. ಅ.31ರಂದು ಸಮಾರೋಪ ಸಮಾರಂಭ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮನ್ಸೂರ್ ಕೃಷ್ಣಾಪುರ, ಕೆ.ಸಿ. ಇಸ್ಮಾಯಿಲ್ ಕಿನ್ಯ, ಅಹ್ಮದ್ ಶರೀಫ್ ಬಜ್ಜೆ ಹಾಗೂ ಸಂಶುದ್ದೀನ್ ಬಳ್ಳುಂಜೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!