ಗೂಂಡಾ ಕಾಯ್ದೆ ವಿರೋಧಿಸಿ ಬಿ.ಸಿ.ರೋಡಿನಲ್ಲಿ ವಿಹಿಂಪ–ಬಜರಂಗದಳ ಪ್ರತಿಭಟನೆ

ಬಂಟ್ವಾಳ: ನ್ಯಾಯಾಲಯದಿಂದ ಜಾಮೀನು ದೊರೆತಿದ್ದರೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧನ ಮುಂದುವರಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನಾ ಸಭೆಯ ಆರಂಭದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ನಡೆಸಲಾಯಿತು. ಬಳಿಕ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಮಾತನಾಡಿ, ಕಾರ್ಯಕರ್ತರ ವಿರುದ್ಧ ಕೈಗೊಂಡಿರುವ ಕಾನೂನು ಕ್ರಮವನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ಹಿಂದೂ ಸಮಾಜವನ್ನು ದಮನಿಸುವ ಪ್ರಯತ್ನ ಬೇಡ: ರಾಜಶೇಖರಾನಂದ ಸ್ವಾಮೀಜಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಕರಾವಳಿ ಪ್ರದೇಶ ಹಿಂದೂ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಹಿಂದೂ ಸಮಾಜ ಸಂಘಟಿತವಾಗುತ್ತಿರುವ ಸಂದರ್ಭದಲ್ಲಿ ಅನಗತ್ಯ ಕಾಯ್ದೆಗಳನ್ನು ಬಳಸಿಕೊಂಡು ದಮನಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.

ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನೋಟಿಸ್ ನೀಡಿರುವ ವಿಚಾರದ ಹಿಂದೆ ಇರುವ ಶಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕು. ಪೊಲೀಸ್ ಇಲಾಖೆ ಯಾರದ್ದೋ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.


ಒಂದು ಕೋಮಿನ ಓಲೈಕೆ ನಿಲ್ಲಲಿ: ಸತೀಶ್ ದಾವಣಗೆರೆ
ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹಸಂಯೋಜಕ ಸತೀಶ್ ದಾವಣಗೆರೆ ದಿಕ್ಸೂಚಿ ಭಾಷಣ ಮಾಡಿದರು.
ಸದೃಢ ಭಾರತ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನೋಟಿಸ್ ನೀಡಿರುವುದು ಸರಿಯಲ್ಲ. ಅಧಿಕಾರಿಗಳು ಯಾವುದೇ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗದೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಹಿಂದೂ ಸಮಾಜದ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂಬ ಭಾವನೆ ಮೂಡಿಸುವ ರೀತಿಯ ಬೆಳವಣಿಗೆಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಎಸ್ಪಿ ಕಚೇರಿ ಚಲೋ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.


ಕಾರ್ಯಕರ್ತರ ಮೇಲಿನ ಕಾಯ್ದೆ ಹಿಂಪಡೆಯಲು ಆಗ್ರಹ
ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಮಾತನಾಡಿ, ಬಜರಂಗದಳವು ಸೇವೆ, ಸುರಕ್ಷೆ ಮತ್ತು ಸಂಸ್ಕಾರದ ತತ್ವಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ. ಸಂಘಟನೆಯ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ಬಳಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಿಹಿಂಪ–ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ್ ಕುತ್ತಾರ್, ಕಾರ್ಯದರ್ಶಿ ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು. ವಿಹಿಂಪ ಬಂಟ್ವಾಳ ತಾಲೂಕು ಅಧ್ಯಕ್ಷ ಹಾಗೂ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ ರಾವ್ ಪ್ರೇರಣಾ ಗೀತೆ ಹಾಡಿದರು.


ಬಿಗು ಪೊಲೀಸ್ ಬಂದೋಬಸ್ತ್
ಪ್ರತಿಭಟನಾ ಸಭೆಯ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಪೊಲೀಸರು ಬಿಗು ಭದ್ರತೆ ಕೈಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರವೇ ಪೊಲೀಸರು ಪಥಸಂಚಲನ ನಡೆಸಿದ್ದು, ಸೋಮವಾರ ಬೆಳಗ್ಗಿನಿಂದಲೇ ಬಿ.ಸಿ.ರೋಡಿನ ಪ್ರಮುಖ ಜಂಕ್ಷನ್‌ಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಅಡಿಷನಲ್ ಎಸ್ಪಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ 8 ಇನ್ಸ್‌ಪೆಕ್ಟರ್‌ಗಳು, 23 ಪಿಎಸ್ಐಗಳು, 34 ಎಎಸ್ಐಗಳು, 184 ಪೊಲೀಸ್ ಸಿಬ್ಬಂದಿ ಹಾಗೂ 5 ಹೋಮ್‌ಗಾರ್ಡ್‌ಗಳನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರೊಂದಿಗೆ 2 ಎಸ್‌ಎಎಫ್, 3 ಡಿಎಆರ್ ಹಾಗೂ 4 ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪ್ರಮುಖರ ಉಪಸ್ಥಿತಿ
ಪ್ರತಿಭಟನಾ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಡಾ. ಕಮಲ ಪ್ರಭಾಕರ ಭಟ್, ಶಾಸಕರಾದ ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಡಾ. ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಸತೀಶ್ ಕುಂಪಲ, ಸಂದೇಶ್ ಶೆಟ್ಟಿ ಅರೆಬೆಟ್ಟು, ಆರ್. ಚೆನ್ನಪ್ಪ ಕೋಟ್ಯಾನ್, ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ನರಸಿಂಹ ಮಾಣಿ, ಸುನಿಲ್ ಕೊಟ್ಟಾರಿ, ಸಂತೋಷ್ ಸರಪಾಡಿ, ಭುಜಂಗ ಕುಲಾಲ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!