ಮಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಬದಲಾವಣೆ: ಮೈಸೂರು ವಿಭಾಗಕ್ಕೆ ಅಧಿಕೃತ ಹಸ್ತಾಂತರ

ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶ ಅ.1ರಿಂದ ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗದ ಅಧೀನಕ್ಕೆ ಬರಲಿದೆ. ಸೆ.30ರ ಮಧ್ಯರಾತ್ರಿಯಿಂದ ಮಂಗಳೂರು ಭಾಗದ ರೈಲು ಕಾರ್ಯಾಚರಣೆ ಹಾಗೂ ಆಡಳಿತಾತ್ಮಕ ನಿಯಂತ್ರಣ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ಹಸ್ತಾಂತರವಾಗಲಿದೆ.

ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯಲು ಪಾಲಕ್ಕಾಡ್ ಹಾಗೂ ಮೈಸೂರು ವಿಭಾಗದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಡಿಆರ್‌ಎಂ ಮುದಿತ್ ಮಿತ್ತಲ್ ತಿಳಿಸಿದ್ದಾರೆ.

ಮಂಗಳೂರು ರೈಲು ಸಂಚಾರ ನಿಯಂತ್ರಣಕ್ಕಾಗಿ ಮೈಸೂರು ವಿಭಾಗೀಯ ಕಚೇರಿಯಲ್ಲಿ ಹೊಸ ಕಂಟ್ರೋಲ್ ಬೋರ್ಡ್ ಸಿದ್ಧಪಡಿಸಲಾಗಿದೆ. ಹೊಸ ವ್ಯವಸ್ಥೆಯಿಂದ ಮೈಸೂರು ವಿಭಾಗದ ಬ್ಲಾಕ್ ಸ್ಟೇಷನ್‌ಗಳ ಸಂಖ್ಯೆ 92ರಿಂದ 99ಕ್ಕೆ ಏರಿಕೆಯಾಗಲಿದೆ. ಮಂಗಳೂರು ಕೋಚಿಂಗ್ ಡಿಪೋದಲ್ಲಿನ ರೈಲುಗಳ ಪ್ರಾಥಮಿಕ ನಿರ್ವಹಣಾ ವ್ಯವಸ್ಥೆಯಲ್ಲಿ ತಕ್ಷಣ ಯಾವುದೇ ಬದಲಾವಣೆ ಇರುವುದಿಲ್ಲ.

ಮಂಗಳೂರು ಪ್ರದೇಶ ಮೈಸೂರು ವಿಭಾಗಕ್ಕೆ ಸೇರಿದ ಬಳಿಕ ನೈಋತ್ಯ ರೈಲ್ವೆ–ದಕ್ಷಿಣ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಪಡೀಲ್‌ನಿಂದ ಉಳ್ಳಾಲಕ್ಕೆ ಬದಲಾಗಲಿದೆ. ಇದರಿಂದ ರೈಲುಗಳ ಸಂಚಾರದಲ್ಲಿ ಸಮನ್ವಯ ಸುಲಭವಾಗಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!