ಬಿ.ಸಿ ರೋಡ್‌ನಲ್ಲಿ ಹಾಡಹಗಲೇ ಯುವತಿಯ ಬರ್ಬರ ಹತ್ಯೆಗೆ ಸಂಸದ ಕ್ಯಾ. ಚೌಟ ದಿಗ್ಭ್ರಮೆ

ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಗೆ ಆಗ್ರಹ

ಮಂಗಳೂರು: ಬಿ.ಸಿ ರೋಡ್‌ ಬಸ್‌ ನಿಲ್ದಾಣದ ಬಳಿ ಇಂದು ಸಂಜೆ ಕೆಲಸ ಮುಗಿಸಿ ಮನೆಗೆ ವಾಪಾಸ್‌ ಆಗುತ್ತಿದ್ದ ಲಾವಣ್ಯ ಎಂಬ ಯುವತಿಯನ್ನು ಯುವಕನೊಬ್ಬ ಹಾಡಹಗಲೇ ಸಾರ್ವಜನಿಕವಾಗಿ ಭೀಕರ ಹತ್ಯೆ ಮಾಡಿರುವ ಘಟನೆ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಂಸದರು, ದಕ್ಷಿಣ ಕನ್ನಡದಂಥಹ ಸುಶಿಕ್ಷಿತ ಜಿಲ್ಲೆಯಲ್ಲಿ ನಾಗರಿಕ ಸಮಾಜ ಬೆಚ್ಚಿ ಬೀಳಿಸುವಂಥ ಹೇಯ ಕೃತ್ಯ ನಡೆದಿರುವುದು ನಿಜಕ್ಕೂ ಆತಂಕ ಮೂಡಿಸುವಂಥದ್ದು. ಯುವಜನತೆ ಇಂತಹ ಹಿಂಸಾತ್ಮಕ ಹಾಗೂ ಕಾನೂನುಬಾಹಿರ ಕೃತ್ಯಗಳತ್ತ ಮುಖ ಮಾಡುತ್ತಿರುವುದು ತೀವ್ರ ಆತಂಕಕಾರಿ ಹಾಗೂ ನೋವಿನ ಸಂಗತಿಯಾಗಿದೆ. ಸಮಾಜದಲ್ಲಿ ಯಾರ ಭಯವೂ ಇಲ್ಲದೆ ಕಾನೂನು ಕೈಗೆತ್ತಿಕೊಂಡು ಅಟ್ಟಹಾಸ ಮೆರೆಯುವಂಥ ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ಯುವಕರು ಅಡ್ಡದಾರಿ ಹಿಡಿದು ಅಪರಾಧ ಕೃತ್ಯ ಎಸಗುವ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದು ಸಮಾಜಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಸರ್ಕಾರ ಹಾಗೂ ಪೊಲೀಸ್‌ ಇಲಾಖೆಯು ಈ ನಿಟ್ಟಿನಲ್ಲಿ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವನ್ನು ದಕ್ಷಿಣ ಕನ್ನಡ ಪೊಲೀಸ್‌ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಆದಷ್ಟು ಬೇಗ ಬಂಧಿಸಬೇಕು. ಅಲ್ಲದೆ, ಆತನಿಗೆ ಅತ್ಯಂತ ಕಠಿಣ ಹಾಗೂ ತ್ವರಿತವಾಗಿ ಶಿಕ್ಷೆಯಾಗುವಂತೆಯೂ ನೋಡಿಕೊಳ್ಳಬೇಕು. “ಮಗಳನ್ನು ಕಳೆದುಕೊಂಡ ಮೃತ ಲಾವಣ್ಯ ಅವರ ಕುಟುಂಬಕ್ಕೆ ಈ ಆಘಾತವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ,” ಎಂದು ಸಂಸದರು ವಿಷಾದ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!