ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ 88ನೇ ಸಂಸ್ಥಾಪನಾ ದಿನಾಚರಣೆ ಅ.10ರಂದು ಕದ್ರಿಯ ಸುಜೀರ ಸಿ.ವಿ. ನಾಯಕ್ ಸಭಾಗೃಹದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರೊ. ಡಾ. ಕಸ್ತೂರಿ ಮೋಹನ ಪೈ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ 120 ಮನೆಗಳನ್ನು ನಿರ್ಮಿಸಿದ್ದು, ವಿದ್ಯಾರ್ಥಿಗಳಿಗೆ ಪುಸ್ತಕ, ಶೈಕ್ಷಣಿಕ ಪರಿಕರ ಹಾಗೂ ಸುಮಾರು 5 ಸಾವಿರ ಮಂದಿಗೆ ಶಾಲಾ ಸಮವಸ್ತ್ರಗಳನ್ನು ವಿತರಿಸಿದೆ. 1940ರಿಂದ ಧರ್ಮಾರ್ಥ ಹೊರರೋಗಿಗಳ ಚಿಕಿತ್ಸಾ ವಿಭಾಗವನ್ನೂ ನಡೆಸುತ್ತಿದ್ದು, ಹಿರಿಯ ನಾಗರಿಕರಿಗೆ ಔಷಧ ನೆರವು ನೀಡಲಾಗುತ್ತಿದೆ ಎಂದರು.

ಸಂಸ್ಥಾಪನಾ ದಿನಾಚರಣೆಯಲ್ಲಿ 10ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಶೈಕ್ಷಣಿಕ ಸಾಧನೆ ಮಾಡಿದ 150 ವಿದ್ಯಾರ್ಥಿಗಳಿಗೆ ‘ಶೈಕ್ಷಣಿಕ ಉತ್ಕೃಷ್ಟತಾ ಸಾಧನೆ’ ಪುರಸ್ಕಾರ ನೀಡಲಾಗುವುದು. ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನೂ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಂಭವಿ ಪ್ರಭು, ಮಂಗಳಾ ಭಟ್, ಎಂ. ರಾಧಾಕೃಷ್ಣ ಕಾಮತ್, ಡಾ. ಎ. ರಮೇಶ ಪೈ ಹಾಗೂ ವೆಂಕಟೇಶ ಎನ್. ಬಾಳಿಗಾ ಉಪಸ್ಥಿತರಿದ್ದರು.

