
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ 31ನೇ ಆಳ್ವಾಸ್ ವಿರಾಸತ್ ಹಾಗೂ 17ನೇ ಆಳ್ವಾಸ್ ನುಡಿಸಿರಿಯನ್ನು ಈ ಬಾರಿ ‘ಆಳ್ವಾಸ್ ನುಡಿಸಿರಿ-ವಿರಾಸತ್’ ಎಂಬ ಹೆಸರಿನಲ್ಲಿ ಜ.6ರಿಂದ 10ರವರೆಗೆ ಐದು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರತ್ಯೇಕವಾಗಿ ಆಯೋಜಿಸಲಾಗುತ್ತಿದ್ದ ಆಳ್ವಾಸ್ ವಿರಾಸತ್ ಹಾಗೂ ಆಳ್ವಾಸ್ ನುಡಿಸಿರಿಯನ್ನು ಈ ಬಾರಿ ಒಂದೇ ವೇದಿಕೆಯಲ್ಲಿ ಸಂಯೋಜಿಸಲಾಗಿದೆ. ಜ.6ರಂದು ಬೆಳಗ್ಗೆ ಐದು ಮೇಳಗಳ ಉದ್ಘಾಟನೆ ನಡೆಯಲಿದ್ದು, ಸಂಜೆ ಆಳ್ವಾಸ್ ವಿರಾಸತ್‌ಗೆ ಭವ್ಯ ಚಾಲನೆ ದೊರೆಯಲಿದೆ. ಜ.7ರಂದು ಆಳ್ವಾಸ್ ನುಡಿಸಿರಿ ಆರಂಭಗೊಳ್ಳಲಿದೆ ಎಂದರು.
ಈ ಬಾರಿಯ ಆಳ್ವಾಸ್ ನುಡಿಸಿರಿಯ ಪರಿಕಲ್ಪನೆ ‘ಕನ್ನಡದ ಮನಸ್ಸು, ಭವಿಷ್ಯದ ಕನಸು’ ಎಂಬುದಾಗಿದೆ. ಯುವಜನತೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಪರಿಕಲ್ಪನೆಯ ಮೂಲಕ ಬದಲಾಗುತ್ತಿರುವ ಸಮಾಜದಲ್ಲಿ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆಯೊಂದಿಗೆ ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು, ಕನ್ನಡದ ಅಸ್ಮಿತೆಯೊಂದಿಗೆ ಕರ್ನಾಟಕದ ಭವಿಷ್ಯವನ್ನು ಕಟ್ಟುವ ಸಂಕಲ್ಪವನ್ನು ಮೂಡಿಸಲಾಗುವುದು ಎಂದು ಹೇಳಿದರು.
ಆಳ್ವಾಸ್ ನುಡಿಸಿರಿ-2026ರ ಸರ್ವಾಧ್ಯಕ್ಷರಾಗಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಒಪ್ಪಿಕೊಂಡಿದ್ದು, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಜ.6ರಂದು ಸಂಜೆ ನಡೆಯುವ ಆಳ್ವಾಸ್ ವಿರಾಸತ್ ಉದ್ಘಾಟನಾ ಸಮಾರಂಭದಲ್ಲಿ ಶಾಸ್ತ್ರೀಯ ಹಾಗೂ ಜಾನಪದ ಕ್ಷೇತ್ರದ ತಲಾ ಒಬ್ಬ ಸಾಧಕರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ಎರಡು ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ನಂತರ ಆಳ್ವಾಸ್ ವಿರಾಸತ್‌ನ ಸಾಂಸ್ಕೃತಿಕ ರಥದ ಎಳೆಯುವಿಕೆ ನಡೆಯಲಿದೆ ಎಂದರು.

‘ಹಸಿರು ಸಂವಾದ’ಕ್ಕೆ ಆದ್ಯತೆ
ಆಳ್ವಾಸ್ ನುಡಿಸಿರಿ-ವಿರಾಸತ್‌ನ ಭಾಗವಾಗಿ ‘ಹಸಿರು ಸಂವಾದ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ 50 ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆಯ ಹೊಸ ಮಾದರಿಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಜ.6 ಮತ್ತು 7ರಂದು ರಾಷ್ಟ್ರೀಯ ಸಮ್ಮೇಳನವನ್ನೂ ಆಯೋಜಿಸಲಾಗಿದೆ. ಪಾವಂಜೆ, ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶಗಳಲ್ಲಿ ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ಸಂಸ್ಕರಣೆ ಹಾಗೂ ಮರುಬಳಕೆಗೆ ಆದ್ಯತೆ ನೀಡಲಾಗುವುದು. ಪರಿಸರ ತಜ್ಞರು, ಗ್ರಾಮ ಪಂಚಾಯಿತಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನದಿ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ ಒತ್ತು ನೀಡಲಾಗುವುದು. ಇದೇ ಸಂದರ್ಭದಲ್ಲಿ ಸ್ವಚ್ಛ ಗ್ರಾಮ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಜ.8ರಂದು ಆಳ್ವಾಸ್ ವಿದ್ಯಾರ್ಥಿ ಸಿರಿ
ಜ.8ರಂದು ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ‘ಆಳ್ವಾಸ್ ವಿದ್ಯಾರ್ಥಿ ಸಿರಿ’ ನಡೆಯಲಿದೆ. ಪ್ರತ್ಯೇಕ ವೇದಿಕೆಯಲ್ಲಿ ನಡೆಯುವ ಈ ಒಂದು ದಿನದ ಸಮ್ಮೇಳನವು ವಿದ್ಯಾರ್ಥಿಗಳ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಒದಗಿಸಲಿದೆ. ಯುವ ಮನಸ್ಸುಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವುಗಳ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಜ.9ರಂದು ಆಳ್ವಾಸ್ ಯುವಸಿರಿ
ಜ.9ರಂದು ‘ಆಳ್ವಾಸ್ ಯುವಸಿರಿ’ ಕಾರ್ಯಕ್ರಮ ನಡೆಯಲಿದ್ದು, ಇದೇ ಮೊದಲ ಬಾರಿಗೆ ಪದವಿ, ಸ್ನಾತಕೋತ್ತರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಯುವಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಾಗುವುದು. ಯುವಜನರ ಚಿಂತನೆ, ಪ್ರತಿಭೆ ಹಾಗೂ ಭವಿಷ್ಯದ ಆಶಯಗಳಿಗೆ ಈ ವೇದಿಕೆ ಅವಕಾಶ ಕಲ್ಪಿಸಲಿದೆ ಎಂದರು.

800 ಯುವ ಕಲಾವಿದರಿಗೆ ಉಚಿತ ಅವಕಾಶ
ಜ.6ರಿಂದ 10ರವರೆಗೆ ಐದು ದಿನಗಳ ಕಾಲ ಸುಮಾರು 800 ವಿದ್ಯಾರ್ಥಿ ಕಲಾವಿದರಿಗೆ ಉಚಿತವಾಗಿ ವಾಸ್ತವ್ಯ ಹಾಗೂ ಪ್ರದರ್ಶನದ ಅವಕಾಶ ಕಲ್ಪಿಸಲಾಗಿದೆ. ಶಾಸ್ತ್ರೀಯ ನೃತ್ಯ, ಸಂಗೀತ, ಪಕ್ಕವಾದ್ಯ ಹಾಗೂ ಏಕವ್ಯಕ್ತಿ ಪ್ರದರ್ಶನಗಳಿಗೆ ಆದ್ಯತೆ ನೀಡಲಾಗುವುದು. ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಪ್ರತ್ಯೇಕ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.
ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಿಗೆ ಹಾಜರಾಗುವ ಆಸಕ್ತ ಕಲಾವಿದರು ಹಾಗೂ 30 ವರ್ಷದೊಳಗಿನ ವಿದ್ಯಾರ್ಥಿ-ಹವ್ಯಾಸಿ ಕಲಾವಿದರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ದೇಶದ ಯುವ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸುವುದು ಇದರ ಉದ್ದೇಶವಾಗಿದೆ ಎಂದು ಮೋಹನ ಆಳ್ವ ಹೇಳಿದರು.
5 ಸಾವಿರಕ್ಕೂ ಅಧಿಕ ಸ್ಕೌಟ್ಸ್, ಗೈಡ್ಸ್
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 5 ಸಾವಿರಕ್ಕೂ ಅಧಿಕ ಸ್ಕೌಟ್ಸ್, ಗೈಡ್ಸ್ ಹಾಗೂ ರೋವರ್ಸ್ ಭಾಗವಹಿಸಲಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಅವರಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಉದ್ದೇಶದಿಂದ ಯೋಗ, ಧ್ಯಾನ, ಸ್ವಚ್ಛತೆ, ದೇಶಪ್ರೇಮ, ಸೇವಾ ಮನೋಭಾವ, ಕ್ರೀಡಾಸ್ಫೂರ್ತಿ, ಸೌಂದರ್ಯ ಪ್ರಜ್ಞೆ, ಪರಿಸರ ಸಂರಕ್ಷಣೆ ಹಾಗೂ ಶಿಸ್ತು ಸೇರಿದಂತೆ ವಿವಿಧ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದರು.

ಐದು ವಿಶೇಷ ಮೇಳಗಳು
ಆಳ್ವಾಸ್ ನುಡಿಸಿರಿ-ವಿರಾಸತ್‌ನೊಂದಿಗೆ ಕೃಷಿ, ವಿಜ್ಞಾನ, ಆಹಾರ, ಪುಸ್ತಕ ಹಾಗೂ ಕಲಾ ಮೇಳಗಳು ನಡೆಯಲಿವೆ. ಕೃಷಿ ಮೇಳದಲ್ಲಿ ಆಧುನಿಕ ಕೃಷಿ ಪದ್ಧತಿ, ತಂತ್ರಜ್ಞಾನ, ವಿವಿಧ ಬೆಳೆಗಳು, ಕೃಷಿ ಉತ್ಪನ್ನಗಳು ಹಾಗೂ ಹೂವಿನ ಜೋಡಣೆಯ ಪ್ರದರ್ಶನ ನಡೆಯಲಿದೆ. ವಿಜ್ಞಾನ ಮೇಳದಲ್ಲಿ ನವೀನ ಆವಿಷ್ಕಾರಗಳು, ವಿಜ್ಞಾನ-ತಂತ್ರಜ್ಞಾನ ಹಾಗೂ ವಿದ್ಯಾರ್ಥಿಗಳ ಸೃಜನಶೀಲ ಪ್ರಯತ್ನಗಳ ಪ್ರದರ್ಶನ ಇರಲಿದೆ.
ಆಹಾರ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಾಂಪ್ರದಾಯಿಕ ಹಾಗೂ ಸ್ಥಳೀಯ ಆಹಾರ ಸಂಸ್ಕೃತಿಯ ಪರಿಚಯ ಮಾಡಿಕೊಡಲಾಗುವುದು. ಪುಸ್ತಕ ಮೇಳದಲ್ಲಿ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಕಲಾ ಮೇಳದಲ್ಲಿ ಚಿತ್ರಕಲೆ, ಹಸ್ತಕಲೆ ಹಾಗೂ ಸಾಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನದೊಂದಿಗೆ ಕಲಾವಿದರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಕಲ್ಪಿಸಲಾಗುವುದು.
ಐದು ದಿನಕ್ಕೆ ಪ್ರತಿನಿಧಿ ಶುಲ್ಕ ₹500
ಈ ಬಾರಿ ಆಳ್ವಾಸ್ ನುಡಿಸಿರಿ-ವಿರಾಸತ್‌ನ ಐದು ದಿನಗಳ ಪ್ರತಿನಿಧಿ ಶುಲ್ಕವನ್ನು ₹500 ನಿಗದಿಪಡಿಸಲಾಗಿದೆ. ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜ್ಞಾನಪರ ಕಾರ್ಯಕ್ರಮಗಳಲ್ಲಿ ಪ್ರತಿದಿನ ಸಕ್ರಿಯವಾಗಿ ಭಾಗವಹಿಸಲು ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಕಲಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬೇಕು ಎಂಬುದು ನಮ್ಮ ಆಶಯ ಎಂದು ಡಾ. ಮೋಹನ ಆಳ್ವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನುಡಿಸಿರಿ-ವಿರಾಸತ್‌ನ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಹಾಗೂ ನುಡಿಸಿರಿ-ವಿರಾಸತ್ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

