ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಹಿರಿಯ ಟೈಲರ್ ಚಿಕಿತ್ಸೆ ಫಲಿಸದೆ ಸಾವು

ಬಂಟ್ವಾಳ, ಅ. 9: ಪುದು ಗ್ರಾಮದ ಕಡೆಗೋಳಿ ಜಂಕ್ಷನ್‌ನಲ್ಲಿ ಗುರುವಾರ ರಸ್ತೆ ದಾಟುತ್ತಿದ್ದ ವೇಳೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಹಿರಿಯ ಟೈಲರ್ ಕೇಶವ ಭಂಡಾರಿ (72) ಅವರು ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೆಲಪಾಡಿ ನಿವಾಸಿಯಾಗಿದ್ದ ಕೇಶವ ಭಂಡಾರಿ ಅವರು ಟೈಲರಿಂಗ್ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಟೈಲರಿಂಗ್ ಅಂಗಡಿಗೆ ತೆರಳುತ್ತಿದ್ದ ಅವರು, ಕಡೆಗೋಳಿ ಜಂಕ್ಷನ್‌ನಲ್ಲಿ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು.

ಈ ಸಂದರ್ಭ ಮೇಲ್ಕಾರ್ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎ 70 ಕೆ 8504 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಕೇಶವ ಭಂಡಾರಿ ಅವರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಅವರ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು.
ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಹಾಗೂ ಮೋಟಾರ್ ಸೈಕಲ್ ಸವಾರರು ಕೂಡಲೇ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೋಟಾರ್ ಸೈಕಲ್ ಸವಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 125(ಎ) ಮತ್ತು 125(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತರು ಪುದು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯೆ, ಬಿಜೆಪಿ ಕಾರ್ಯಕರ್ತೆ ವಸಂತಿ ಭಂಡಾರಿ ಅವರ ಪತಿಯಾಗಿದ್ದು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!