ಮಂಗಳೂರು: ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯದ ಹಾರೈಕೆಯೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳ ಉದ್ಘಾಟನೆ, ಅಶಕ್ತರಿಗೆ ನೆರವು ವಿತರಣೆ ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ ಕಾರ್ಯಕ್ರಮ ಗುರುವಾರ ಎಸ್ಸಿಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಪರ್ಯಾಯ ಅಧೋಕ್ಷಜ ಮಠದ ಪೇಜಾವರ ಶ್ರೀಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಆಶೀರ್ವಚನ ನೀಡಿದ ಪೇಜಾವರ ಶ್ರೀಗಳು, “ನಾವೆಲ್ಲರೂ ವಿಜಯದಶಮಿ ಹಾಗೂ ನವರಾತ್ರಿ ಪರ್ವಕಾಲದಲ್ಲಿದ್ದೇವೆ. ಪಂಚ ಮಹಾಪರ್ವಗಳಲ್ಲಿ ನವರಾತ್ರಿ ಉತ್ಸವ ಅತ್ಯಂತ ಮಹತ್ವದ್ದಾಗಿದೆ. ಇಂತಹ ಉತ್ಸವಗಳು ಜನರಲ್ಲಿ ಹರ್ಷ, ಉಲ್ಲಾಸ, ಶಕ್ತಿ ಮತ್ತು ಪ್ರೇರಣೆಯನ್ನು ತುಂಬುವುದರೊಂದಿಗೆ ಸಮಾಜದ ಒಗ್ಗಟ್ಟಿಗೂ ಸಹಕಾರಿಯಾಗಿವೆ. ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಆರೋಗ್ಯ, ಆಯಸ್ಸು ಮತ್ತು ಉತ್ತಮ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯ. ಅವರು ಸಮಾಜದೊಂದಿಗೆ ನೂರು ಕಾಲ ಸುಖವಾಗಿ ಬಾಳಲಿ. ದೇವರ ಸೇವೆ ಮತ್ತು ಸಮಾಜ ಸೇವೆ ಒಂದಕ್ಕೊಂದು ಪೂರಕವಾಗಿವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಕಲ ಜೀವಿಗಳ ಹೃದಯದಲ್ಲಿ ನೆಲೆಸಿರುವುದಾಗಿ ತಿಳಿಸಿದ್ದಾನೆ. ಸಮಾಜದ ಪ್ರತಿಯೊಬ್ಬರಲ್ಲಿಯೂ ಭಗವಂತನನ್ನು ಕಾಣುತ್ತಾ, ಸಮಾನತೆ ಮತ್ತು ಸಹಕಾರದ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ರಾಜೇಂದ್ರ ಕುಮಾರ್ ಅವರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ” ಎಂದು ಹೇಳಿದರು.



ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, “ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಗುಣಮುಖನಾಗಿ ಮರಳಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಕೇಂದ್ರಗಳ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸ ನನ್ನ ಮೇಲೆ ನಿರಂತರವಾಗಿರಲಿ” ಎಂದು ಆಶಿಸಿದರು.

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, “ದೇವರಿಗೆ ಅರ್ಪಿಸಿದ ಹೂವುಗಳನ್ನು ಕಸವೆಂದು ಪರಿಗಣಿಸದೆ, ಅವುಗಳ ಪಾವಿತ್ರ್ಯವನ್ನು ಕಾಪಾಡಿಕೊಂಡು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಉಡುಪಿಯಲ್ಲಿ ವಿಶೇಷ ಯೋಜನೆಯೊಂದನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಮುಜರಾಯಿ ಹಾಗೂ ಮುಜರಾಯಿಯೇತರ ಅನೇಕ ದೇವಸ್ಥಾನಗಳಿವೆ. ಭಕ್ತರು ಶ್ರದ್ಧಾಭಕ್ತಿಯಿಂದ ದೇವರಿಗೆ ಸಮರ್ಪಿಸುವ ಹೂವುಗಳನ್ನು ಕಸಕ್ಕೆ ಎಸೆಯುವ ಬದಲು, ಅವುಗಳಿಂದ ಅಗರಬತ್ತಿ, ಧೂಪ ಮತ್ತು ಕೊಠಡಿ ಸುಗಂಧ ದ್ರವ್ಯಗಳಂತಹ ಉತ್ಪನ್ನಗಳನ್ನು ತಯಾರಿಸಿ ಮರುಬಳಕೆ ಮಾಡಬಹುದು. ದೇವಸ್ಥಾನಗಳಿಂದ ಪವಿತ್ರ ಹೂವುಗಳನ್ನು ಗೌರವಯುತವಾಗಿ ಸಂಗ್ರಹಿಸಲು ಬ್ಯಾಂಕ್ ನೀಡಿರುವ ವಾಹನವನ್ನು ಈ ಉದ್ದೇಶಕ್ಕಾಗಿ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು” ಎಂದರು.


ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, “ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯಾವುದೇ ಜಾತಿ, ಸಮುದಾಯ ಅಥವಾ ಕುಟುಂಬಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಅವರು, ಎಲ್ಲರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅವರ ಸುಖದಲ್ಲಿ ಸಂತೋಷಪಡುವುದು ಹಾಗೂ ಕಷ್ಟದಲ್ಲಿ ಜೊತೆಯಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ. ಅವರು ಉತ್ತಮ ಆರೋಗ್ಯದೊಂದಿಗೆ ನೂರು ಕಾಲ ಬಾಳಲಿ ಮತ್ತು ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿ ದೊರೆಯಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೆಎಂಎಫ್ ನಿರ್ದೇಶಕ ರವಿರಾಜ್ ಹೆಗ್ಡೆ, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಭಾಸ್ಕರ್ ಹೆಗ್ಡೆ ಹಾಗೂ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.

