
ನೆಲ್ಯಾಡಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಹಪ್ರಯಾಣಿಕ ಮೃತಪಟ್ಟಿದ್ದು, ಚಾಲಕ ಗಾಯಗೊಂಡ ಘಟನೆ ಅ.22ರ ತಡರಾತ್ರಿ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ.

ನೆಲ್ಯಾಡಿ ಐಟಿಐ ಕಾಲೇಜಿನ ಮುಂಭಾಗ ಹಾಸನದಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ತಮಿಳುನಾಡು ನೋಂದಣಿಯ ಟ್ಯಾಂಕರ್ ಲಾರಿಯ ಹಿಂಭಾಗಕ್ಕೆ ಹಾಸನ ಕಡೆಯಿಂದ ಬಂದ ಕೆಎ-22-ಎಂಎ-5270 ನೋಂದಣಿಯ ಕಾರು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಹಾಗೂ ಸಹಪ್ರಯಾಣಿಕ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ಗಾಯಾಳುಗಳನ್ನು ನೆಲ್ಯಾಡಿಯ ಆಸ್ಪತ್ರೆಗೆ ಕರೆದೊಯ್ದಿದ್ದು, ಸಹಪ್ರಯಾಣಿಕನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಗಾಯಗೊಂಡ ಕಾರು ಚಾಲಕನನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 281 ಮತ್ತು 106ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


