
ಮಂಗಳೂರು: ಸರ್ವಧರ್ಮಗಳ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶ ಸಾರುವ 12ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಸಂಭ್ರಮಾಚರಣೆ ನವೆಂಬರ್ 8ರಂದು ಮಂಗಳೂರಿನಲ್ಲಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಕದ್ರಿ ಪಾರ್ಕ್ ಸಮೀಪದ ಶ್ರೀ ಗೋರಕ್ಷನಾಥ ಜ್ಞಾನಮಂದಿರ ಸಭಾಂಗಣದಲ್ಲಿ ಮಧ್ಯಾಹ್ನ 1.30ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಜೆ. ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಮಂಗಳೂರಿನ ವಿವಿಧೆಡೆ ಸರ್ವಧರ್ಮಗಳ ಜನರನ್ನು ಒಗ್ಗೂಡಿಸಿ ದೀಪಾವಳಿ, ಕ್ರಿಸ್ಮಸ್ ಹಾಗೂ ರಂಜಾನ್ ಹಬ್ಬಗಳನ್ನು ಭಾವೈಕ್ಯತೆಯ ಸಂಕೇತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಈ ಬಾರಿಯೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದೀಪಾವಳಿ ಸಂಭ್ರಮ ಆಯೋಜಿಸಲಾಗಿದ್ದು, ಈಗಾಗಲೇ ಸಮಿತಿ ರಚಿಸಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಭರತನಾಟ್ಯ, ಚಿತ್ರಕಲೆ ಹಾಗೂ ಗೂಡುದೀಪ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಭರತನಾಟ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನವಾಗಿ 20 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 15 ಸಾವಿರ ರೂ. ನಗದು ಬಹುಮಾನದೊಂದಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.
ಕಳೆದ ವರ್ಷ ಮಂಗಳೂರು ಪುರಭವನದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 850 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದರು. ಈ ಬಾರಿಯೂ ಒಂದನೇ ತರಗತಿಯಿಂದ ಪಿಯುಸಿ ವರೆಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ಸ್ಪರ್ಧೆಗೆ ಚಾಲನೆ ನೀಡಲಾಗುವುದು.
ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸಗಳ ಗೂಡುದೀಪ ಸ್ಪರ್ಧೆಯನ್ನೂ ಒಂದೇ ವಿಭಾಗದಲ್ಲಿ ಆಯೋಜಿಸಲಾಗಿದೆ. ಸ್ಪರ್ಧಿಗಳು ತಾವು ಸಿದ್ಧಪಡಿಸಿದ ಗೂಡುದೀಪಗಳನ್ನು ಪ್ರದರ್ಶನಕ್ಕೆ ತರಬಹುದಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೊಂದಿಗೆ ನಗದು, ಟ್ರೋಫಿ ಮತ್ತು ಪ್ರಮಾಣಪತ್ರ ವಿತರಿಸಲಾಗುವುದು.

ಸಂಜೆ 3 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕೇಮಾರು ಮಠದ ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿ ದೀಪಾವಳಿ ಹಬ್ಬದ ಸಂದೇಶ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದು, ಪಾಲ್ದಾನೆ ಚರ್ಚ್ನ ಧರ್ಮಗುರು ವಂ. ರೆ. ಫಾ. ರಿಚರ್ಡ್ ಕುವೆಲ್ಲೊ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್. ಹಸನಬ್ಬ ಚಾರ್ಮಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯಕ್ಷಗಾನ ಕಲೆಯ ಮೂಲಕ ಗುರುತಿಸಿಕೊಂಡಿರುವ ಯಕ್ಷಪ್ರಿಯೆ ಕುಮಾರಿ ಅರ್ಷಿಯಾ ಖಾನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಚಿತ್ರಕಲಾ ಸ್ಪರ್ಧೆಯನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಐಎಎಸ್ ಉದ್ಘಾಟಿಸಲಿದ್ದು, ಭರತನಾಟ್ಯ ಸ್ಪರ್ಧೆಗೆ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಚಾಲನೆ ನೀಡಲಿದ್ದಾರೆ. ಗೂಡುದೀಪ ಸ್ಪರ್ಧೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಮಾರಿ ಪ್ರಗತಿ ಬೇಕಲ್, ಎನ್.ಪಿ. ಮನುರಾಜ್, ಮನೀಷ್ ಬೋಳಾರ್, ಅಮೃತ್ ಕದ್ರಿ, ಜೇಮ್ಸ್ ಪ್ರವೀಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

