ಕಾಸರಗೋಡು: ಗಡಿನಾಡು ಕಾಸರಗೋಡಿನ ಕನ್ನಡದ ಧ್ವನಿಯನ್ನು ರಾಜಧಾನಿ ಬೆಂಗಳೂರಿನಲ್ಲಿ ಸಮರ್ಥವಾಗಿ ಮೊಳಗಿಸುವಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆ ಯಶಸ್ವಿಯಾಗಲಿ ಎಂದು ಕಲಾ ಪೋಷಕ ಹಾಗೂ ಪಾಕತಜ್ಞ ಶ್ರೀ ನಾರಾಯಣ ಪ್ರಕಾಶ್ ಶೆಡ್ಡು ಹಾರೈಸಿದರು.

ರಾಷ್ಟ್ರಮಟ್ಟದ ಹಲವು ವೇದಿಕೆಗಳಲ್ಲಿ ಪ್ರದರ್ಶನಗಳನ್ನು ನೀಡಿ ಗುರುತಿಸಿಕೊಂಡಿರುವ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸಾಧನೆಯ ಪಯಣ ನಿರಂತರವಾಗಿ ಸಾಗಲಿ. ಸಂಸ್ಥೆಯ ಕಲಾ ಸೇವೆಗೆ ಕುಂಬಳೆ ಸೀಮೆಯ ಕಾರಣಿಕ ಶಕ್ತಿಗಳು ಕೃಪೆ ತೋರಲಿ ಎಂದು ಅವರು ಆಶಿಸಿದರು.

ಕನ್ನಡಮ್ಮನ ಸೆರಗು ಕಾಸರಗೋಡಿನ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಯಕ್ಷಗಾನ ತಂಡದ ಬೆಂಗಳೂರು ಪಯಣಕ್ಕೆ ಕನ್ನಡ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿ ಅವರು ಮಾತಾಡಿದರು.

ರಂಗಸಿರಿ ಯಕ್ಷಗಾನ ತಂಡವು ಬೆಂಗಳೂರಿನ ಚಿಕ್ಕನಾಯಕನಹಳ್ಳಿಯ DSR ಹೈಲ್ಯಾಂಡ್ ಗ್ರೀನ್ಸ್ನಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನ ನೀಡಲಿದೆ.

ಗಡಿನಾಡಿನ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ರಾಜಧಾನಿಯಲ್ಲಿ ಪರಿಚಯಿಸುವ ಈ ಪ್ರಯತ್ನಕ್ಕೆ ಕನ್ನಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

