ಮಂಗಳೂರು: ಉಡುಪಿಯಲ್ಲಿ ಡಿ.28ರಿಂದ 30ರವರೆಗೆ ನಡೆಯಲಿರುವ ‘ಶ್ರೀ ಶಂಕರ ವಿಜಯೋತ್ಸವ-2026’ರ ಪೂರ್ವಭಾವಿಯಾಗಿ ನ.22ರಂದು ಸಂಜೆ 4ಕ್ಕೆ ಮಂಗಳೂರಿನ ಶರವು ದೇವಳ ಬಳಿಯ ಶ್ರೀ ರಾಧಾಕೃಷ್ಣ ದೇವಸ್ಥಾನದ ಬಾಳಂಭಟ್ ಸಭಾಭವನದಲ್ಲಿ ಆರಂಭೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಆದಿ ಶಂಕರಾಚಾರ್ಯರ ಮಹತ್ವಪೂರ್ಣ ಕಾರ್ಯಗಳು ಮತ್ತು ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಶ್ರೀ ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಶಂಕರ ಶಿಷ್ಯರ ಸಮ್ಮಿಲನದೊಂದಿಗೆ ಈ ಉತ್ಸವ ಆಯೋಜಿಸಲಾಗುತ್ತಿದೆ ಎಂದರು.

ಆರಂಭೋತ್ಸವದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಶ್ರೀ ಶೃಂಗೇರಿ ಮಠದ 40ಕ್ಕೂ ಅಧಿಕ ಶಿಷ್ಯ ಸಮುದಾಯಗಳ ಪ್ರತಿನಿಧಿಗಳು, ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನ.22ರಂದು ಬೆಳಗ್ಗೆ ನಗರದ ಶಾರದಾ ವಿದ್ಯಾಲಯದಲ್ಲಿ ಚಿತ್ರಕಲೆ, ಭಾಷಣ, ಸ್ತೋತ್ರ ಪಠಣ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರು ದಿನಗಳ ಶ್ರೀ ಶಂಕರ ವಿಜಯೋತ್ಸವದಲ್ಲಿ ಕೇಂದ್ರ ಗೃಹ ಸಚಿವರು, ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಶಂಕರ ವಿಜಯೋತ್ಸವ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಆರ್ಥಿಕ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿ ನರೇಶ್ ಮಲ್ಲಿಗೆಮಾಡು, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ್ ಹಾಗೂ ಸಮಿತಿ ಸದಸ್ಯ ದೇವದಾಸ ರೈ ಮೇನಾಲ ಉಪಸ್ಥಿತರಿದ್ದರು.

