
ಮಂಗಳೂರು: ಮೇರಿಹಿಲ್ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ವತಿಯಿಂದ ನ.28 ಮತ್ತು 29ರಂದು ಎರಡು ದಿನಗಳ ‘ಎಂಸಿಸಿಎಸ್ ಫೆಸ್ಟೆಂಬರ್ 2026’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ಸಿ| ಮೆಲಿಸ್ಸಾ ತಿಳಿಸಿದರು.

ಶುಕ್ರವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ ಈಜುಕೊಳ ನಿರ್ಮಾಣ ಯೋಜನೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಉತ್ಸವದಲ್ಲಿ ಆಹಾರ ಮೇಳ, ಅದೃಷ್ಟದ ಆಟಗಳು, ಡಿಜೆ ಸಂಗೀತ, ತುಳು ಸಾಂಸ್ಕೃತಿಕ ಕಾರ್ಯಕ್ರಮ ‘ಕರಾವಳಿ ಕಲಾಸಿರಿ’, ಲೈವ್ ಮ್ಯೂಸಿಕ್ ಬ್ಯಾಂಡ್, ಪೆಟ್ ಶೋ, ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ಪ್ರದರ್ಶನ, ಕುಟುಂಬ ಬಾಂಧವ್ಯ ಸಾರುವ ಕಾರ್ಯಕ್ರಮ, ತಾಯಂದಿರಿಗಾಗಿ ಫ್ಯಾಷನ್ ವಾಕ್ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದರೊಂದಿಗೆ 3ಎ ಸೈಡ್ ಫುಟ್ಬಾಲ್ ಹಾಗೂ ಪಿಕಲ್ಬಾಲ್ ಪಂದ್ಯಾವಳಿಗಳನ್ನೂ ಆಯೋಜಿಸಲಾಗಿದೆ. ನ.28ರಂದು ಮಧ್ಯಾಹ್ನ 3.30ರಿಂದ ರಾತ್ರಿ 9ರವರೆಗೆ ಹಾಗೂ ನ.29ರಂದು ಬೆಳಗ್ಗೆ 11ರಿಂದ ರಾತ್ರಿ 9.30ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳು, ಪೋಷಕರು, ಹಿತೈಷಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಿಟಿಎ ಉಪಾಧ್ಯಕ್ಷ ಸುಜಯ್ ಡಿಸಿಲ್ವಾ, ಜತೆ ಕಾರ್ಯದರ್ಶಿ ಮೆರ್ಲಿನ್ ಪಿರೇರಾ, ಸದಸ್ಯ ವಿಲಿಯಂ ರೆಬೆಲ್ಲೋ ಹಾಗೂ ಶಾಲಾ ಸಿಬ್ಬಂದಿ ಶೈಲಾ ಕ್ರಾಸ್ತ ಉಪಸ್ಥಿತರಿದ್ದರು.

