ಸಂಗೀತ ಪರಿಷತ್ ಮಂಗಳೂರು(ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಭಾರತೀಯ ವಿದ್ಯಾ ಭವನ ಮತ್ತು ರಾಮಕೃಷ್ಣ ಮಠದ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಮೂರು ದಿನಗಳ ಮಂಗಳೂರು ಸಂಗೀತೋತ್ಸವ-2026 ನ್ನು ರಾಮಕೃಷ್ಣ ಮಠದ ಅಧ್ಯಕ್ಷ ರಾದ ಪೂಜ್ಯ ಸ್ವಾಮಿ ಜಿತಕಾಮಾನಂದಜೀ ಅವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಶರವು ರಾಘವೇಂದ್ರ ಶಾಸ್ತ್ರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ರಾಘವೇಂದ್ರ ಶಾಸ್ತ್ರಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ , ಕಳೆದ ಮೂವತ್ತ ಮೂರು ವರ್ಷಗಳಿಂದ ಸಂಗೀತ ಪರಿಷತ್ತಿನ ದಕ್ಷಿಣ ಕನ್ನಡ ಅವಳಿ ಜಿಲ್ಲೆಗಳ ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಲೇ, ಪರವೂರುಗಳಿಂದಲೂ ಸುಪ್ರಸಿದ್ಧ ಕಲಾವಿದರನ್ನು ಕರೆಸಿ ಕಚೇರಿಯನ್ನು ಕೇಳುವ ಸೌಭಾಗ್ಯವನ್ನು ಮಂಗಳೂರಿಗರಿಗೆ ಒದಗಿಸಿ ಕೊಡುವ ಉತ್ತಮ ಕಾರ್ಯದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಸಂಕಷ್ಟಹರ ಚತುರ್ಥಿಯ ಶುಭ ದಿನದಂದು ಹಾಗೂ ಕನಕದಾಸರ ಜಯಂತಿಯಂದು ಆರಂಭಗೊಂಡ ಸಂಗೀತೋತ್ಸವಕ್ಕೆ ಶುಭವನ್ನು ಹಾರೈಸಿದರು.

ಈ ವರ್ಷದ ಸಂಗೀತೋತ್ಸವವನ್ನು ಕರ್ನಾಟಕ ಸಂಗೀತ ಲೋಕದ ಸ್ವರ ಸಾಮ್ರಾಜ್ಞಿ, ಭಾರತ ರತ್ನ ಸನ್ಮಾನಿತರಾದ ಡಾ.ಎಮ್ ಎಸ್ ಸುಬ್ಬುಲಕ್ಷ್ಮಿಯವರಿಗೆ ಅವರ ೧೧೦ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಮರ್ಪಣೆ ಮಾಡಿರುವುದು ಅತ್ಯಂತ ಉಚಿತವಾಗಿದೆ ಎಂದು ತಿಳಿಸಿದರು. ಸಂಗೀತ ಪರಿಷತ್ತಿನ ಅವಿಚ್ಛಿನ್ನ ಸಂಗೀತ ಸೇವೆಯು ಮುಂದೆಯೂ ಹೀಗೆಯೇ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲೆಂದು ಹಾರೈಸುತ್ತಾ ಈ ಸತ್ಕಾರ್ಯದಲ್ಲಿ ತಮ್ಮ ಪ್ರೋತ್ಸಾಹ ಮತ್ತು ಬೆಂಬಲವು ನಿರಂತರವಾಗಿ ಇರುವುದೆಂದು ತಿಳಿಸಿದರು. ಈ ಮೂರು ದಿನಗಳ ಸಂಗೀತೋತ್ಸವದಿಂದ ಮಂಗಳೂರಿಗರ ಮನಗಳಲ್ಲಿ ಸದಾ ಹರ್ಷವು ತುಂಬಿರಲಿ ಎಂದು ಶ್ಲ್ಯಾಘಿಸಿದರು. ನಂತರ ಮಾತನಾಡಿದ ಕರಾವಳಿ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಲಿ ಇದರ ಅಧ್ಯಕ್ಷರಾದ ಶ್ರೀ ಭರತ್ ಕುಮಾರ್ ಎ ಅವರು ಸಂಗೀತದಿಂದ ಮನೋಲ್ಲಾಸ ತುಂಬುವುದು ಮತ್ತು ಇದರಿಂದ ಸದಾ ಸಂತೋಷಮಯವಾದ, ಚೈತನ್ಯದಾಯಕವಾದ ವಾತಾವರಣ ತುಂಬುವುದು ಎಂದು ಹೇಳಿದರು.

ಸಂಗೀತ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹೆಚ್ ಸುಬ್ರಹ್ಮಣ್ಯ ರಾವ್, ಉಪಾಧ್ಯಕ್ಷ ಎಂ.ವಿ. ಪ್ರದೀಪ್, ಕಾರ್ಯದರ್ಶಿ ಸುಬ್ರಹ್ಮಣ್ಯ ಉಡುಪ, ಜೊತೆ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ವ್ಯಾಸಪ್ರಸಾದ್ ಹಾಗೂ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಮತಿ ಲಲಿತಾ ಕಲ್ಕೂರ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಶ್ರೀ ಅನೀಶ್ ಭಟ್ ರವರ ಅದ್ಭುತವಾದ ಸಂಗೀತ ಕಚೇರಿಯು ನಡೆಯಿತು. ಪಿಟೀಲಿನಲ್ಲಿ ಶ್ರೀ ಆದಿತ್ಯ ಅನಿಲ್ ತ್ರಿಶೂರ್, ಮೃದಂಗದಲ್ಲಿ ಶ್ರೀಅನಿರುದ್ಧ ರಾಜ್ ಪಾಲಕ್ಕಾಡ್,ಮತ್ತು ಮೋರ್ಸಿಂಗ್ ನಲ್ಲಿ ಶ್ರೀ ಬಾಲಕೃಷ್ಣ ಹೊಸಮನೆ ಸಹಕಾರ ನೀಡಿದ್ದರು.

