ಮಂಗಳೂರು : ನಡುಪದವು ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ “ವಿತರಣಾ ಕಂಪ್ಯೂಟಿಂಗ್, ವಿಎಲೆಸ್ಐ, ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೋಬೋಟಿಕ್ಸ್” ವಿಷಯಾಧಾರಿತ ‘ಐಇಇಇ ಡಿಸ್ಕವರ್ 2025’ 9ನೇ ಅಂತರಾಷ್ಟ್ರೀಯ ಸಮ್ಮೇಳನವು ಶುಕ್ರವಾರ ಭವ್ಯವಾಗಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ವಾಸುದೇವ ಕಾಮತ್, ಉಪಾಧ್ಯಕ್ಷರು, ಇನ್ಫೋಸಿಸ್ ಮಂಗಳೂರು ಹಾಗೂ ಮುಖ್ಯಸ್ಥರು, ಡೆಲಿವರಿ ರಿಸ್ಕ್ ಮ್ಯಾನೇಜ್ಮೆಂಟ್, ಅವರು ನವೀನ ಆವಿಷ್ಕಾರಗಳ ಮಹತ್ವ ಮತ್ತು ತಂತ್ರಜ್ಞಾನಗಳ ಸುರಕ್ಷಿತ ಹಾಗೂ ನೈತಿಕ ಬಳಕೆಯ ಅಗತ್ಯತೆಯನ್ನು ತಮ್ಮ ಉದ್ಘಾಟನಾ ಭಾಷಣದಲ್ಲಿ ಒತ್ತಿ ಹೇಳಿದರು. “ಆವಿಷ್ಕಾರಗಳು ರಾಷ್ಟ್ರದ ಅಭಿವೃದ್ಧಿಯ ಜೊತೆಗೆ ಸಮಾಜದ ಕಲ್ಯಾಣಕ್ಕೂ ಪೂರಕವಾಗಬೇಕು,” ಎಂದು ಅವರು ಅಭಿಪ್ರಾಯಪಟ್ಟರು. ಐಇಇಇ ಮಂಗಳೂರು ಉಪವಿಭಾಗದ ಅಧ್ಯಕ್ಷರಾದ ಡಾ. ಸತ್ಯನಾರಾಯಣ ಅವರು ಐಇಇಇ ಸಂಸ್ಥೆಯ ಉದ್ದೇಶಗಳು, ಸಾಧನೆಗಳು ಮತ್ತು ‘ಡಿಸ್ಕವರ್ 2025’ ಸಮ್ಮೇಳನದ ಮಹತ್ವದ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ. ಅವರು ಸಮ್ಮೇಳನದ ಮಹತ್ವದ ಕುರಿತು ಸಾಂದರ್ಭಿಕವಾಗಿ ಮಾತನಾಡಿ, ಸಂಶೋಧನೆ ಮತ್ತು ತಾಂತ್ರಿಕ ಶಿಕ್ಷಣದ ಮಧ್ಯೆ ಸಮನ್ವಯದ ಅಗತ್ಯತೆಯನ್ನು ಪ್ರಸ್ತಾಪಿಸಿದರು.ವೇದಿಕೆಯಲ್ಲಿ ಡಾ. ವಾಸುದೇವ ಆಚಾರ್ಯ(ಪ್ರಾಧ್ಯಾಪಕ, NMAIT), ಶರಫುದ್ದೀನ್ ಪಿ.ಕೆ. (ಸಹಾಯಕ ಪ್ರಧಾನ ವ್ಯವಸ್ಥಾಪಕ, ಪಿ.ಎ. ಎಜುಕೇಶನಲ್ ಟ್ರಸ್ಟ್) ಹಾಗೂ ಡಾ. ಅಫೀಫ ಸಲೀಮ್ (ಪ್ರಾಂಶುಪಾಲೆ, ಪಿ.ಎ. ಇನ್ಸ್ಟಿಟ್ಯೂಟ್ ಆಫ್ ಫಿಸಿಯೊಥೆರಪಿ) ಉಪಸ್ಥಿತರಿದ್ದರು.
ಸಮ್ಮೇಳನದ ಸಂಘಟನಾ ಅಧ್ಯಕ್ಷೆ ಮತ್ತು ಉಪಪ್ರಾಂಶುಪಾಲೆ ಡಾ. ಶರ್ಮಿಳಾ ಕುಮಾರಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಜಾಕೀರ್ ಬೆಳ್ಳಾರಿ ಅವರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆ ಪ್ರೊ. ಫಾತಿಮತ್ ರೈಹಾನ ಅವರು ನಿರ್ವಹಿಸಿದರು.