ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ : ಶಾಸಕ ಅಶ್ರಫ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯಿಂದ ಅಭಿನಂದನೆ

ಕೇರಳ ವಿಧಾನಸಭೆಯ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಂಜೇಶ್ವರ ಕ್ಷೇತ್ರದ ಯು.ಡಿ.ಫ್ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿಯು ಅವರನ್ನು ಅಭಿನಂದಿಸಿ ಕನ್ನಡಾಭಿಮಾನವನ್ನು ಕೊಂಡಾಡಿತು. ಗಡಿನಾಡಿನ ಕನ್ನಡಿಗರ ಭಾವನೆಗಳಿಗೆ ಗೌರವ ಸೂಚಿಸುವ ರೀತಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ ಎಂದು ಸಮಿತಿಯ ಪದಾಧಿಕಾರಿಗಳ ಪರವಾಗಿ ಹಸೈನಾರ್ ತಾಳಿತ್ತನೂಜಿ ಅಭಿನಂದನೆ ಸಲ್ಲಿಸಿದರು.

ಗಡಿನಾಡಿನ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ನಿಂತಿರುವ ಶಾಸಕ ಅಶ್ರಫ್ ಅವರು ಹಲವು ಸಾಮಾಜಿಕ ಹಾಗೂ ಜನಪರ ಹೋರಾಟಗಳ ಮೂಲಕ ಜನಮನ ಗೆದ್ದಿದ್ದಾರೆ ಎಂದು ಸಮಿತಿ ತಿಳಿಸಿದೆ. ಕಾಸರಗೋಡು ಭಾಗದ ಕನ್ನಡಿಗರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಅವರು ನಿರಂತರ ಪ್ರಯತ್ನಿಸುತ್ತಿದ್ದು, ಕನ್ನಡಿಗರ ಪರ ಧ್ವನಿಯಾಗಿದ್ದಾರೆ ಎಂದು ಕನ್ನಡ ಜಾಗೃತಿ ಈ ಸಂಧರ್ಭದಲ್ಲಿ ತಿಳಿಸಿದರು.

ಉತ್ತರ ಕನ್ನಡದಲ್ಲಿ ಸಂಭವಿಸಿದ್ದ ದುರಂತ ಘಟನೆಯೊಂದರಲ್ಲಿ ಅರ್ಜುನ್ ಎಂಬ ಯುವಕನ ಶವ ಪತ್ತೆಗಾಗಿ ನಡೆಸಿದ ಹೋರಾಟ ಮತ್ತು ಅಧಿಕಾರಿಗಳ ಮೇಲೆ ಒತ್ತಡ ತಂದು ಮಾನವೀಯತೆ ಮೆರೆದ ಕಾರ್ಯವನ್ನು ಸಮಿತಿ ವಿಶೇಷವಾಗಿ ಸ್ಮರಿಸಿತು. ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅವರು ತೋರಿದ ಬದ್ಧತೆ ಜನರಲ್ಲಿ ವಿಶ್ವಾಸ ಮೂಡಿಸಿದೆ ತಿಳಿಸಿದರು

ಕಾಸರಗೋಡು ಭಾಗದ ಕನ್ನಡಿಗರಿಗೆ ರೇಷನ್ ಕಾರ್ಡ್‌ಗಳನ್ನು ಕನ್ನಡದಲ್ಲಿಯೇ ಮುದ್ರಣಗೊಳ್ಳುವಂತೆ ಮಾಡಿದ ಪ್ರಯತ್ನವೂ ಗಮನಾರ್ಹವಾಗಿದೆ ಎಂದು ಸಮಿತಿ ತಿಳಿಸಿದೆ. ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಅಶ್ರಫ್ ಅವರು ಕನ್ನಡದ ಉಳಿವು-ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ ಎಂದು ಪ್ರಶಂಸಿದರು.

ಜಾತಿ-ಮತ ಭೇದವಿಲ್ಲದೆ ಸೌಹಾರ್ದತೆಯ ಸಂದೇಶ ಸಾರುತ್ತಾ ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಶ್ರಮಿಸುತ್ತಿರುವ ಶಾಸಕ ಅಶ್ರಫ್ ಅವರಂತಹ ಜನಪ್ರತಿನಿಧಿಗಳು ಗಡಿನಾಡಿನ ಜನತೆಗೆ ಮಾದರಿಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಪರವಾಗಿ ತಿಳಿಸಿದರು. ಕನ್ನಡ ಪ್ರೇಮ ಮತ್ತು ಜನಸೇವೆಯ ಮೂಲಕ ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಅವರಿಗೆ ಮುಂದಿನ ದಿನಗಳಲ್ಲೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!