ಆಪರೇಷನ್ ತುಫಾನ್’ : ರಾಜ್ಯದ ಜೈಲುಗಳಲ್ಲಿ ತಪಾಸಣೆ, ಗಾಂಜಾ, ಹಶೀಶ್ ಎಣ್ಣೆ, ಚಾಕು ಹಾಗೂ ನಿಷೇಧಿತ ವಸ್ತುಗಳು ವಶ

ತಿರುವನಂತಪುರಂ:* ‘ಆಪರೇಷನ್ ತುಫಾನ್’ದ ಭಾಗವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ನಡೆಸಿದ ವಿಶೇಷ ತಪಾಸಣೆ ವೇಳೆ ಗಾಂಜಾ, ಹಶೀಶ್ ಎಣ್ಣೆ, ಚಾಕು, ಮೊಬೈಲ್ ಚಾರ್ಜರ್, ಸಿಗರೇಟ್ ಮತ್ತು ಬೀಡಿ ಸೇರಿದಂತೆ ಹಲವು ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಿರುವನಂತಪುರದ ಪೂಜಪ್ಪುರ ಕೇಂದ್ರ ಕಾರಾಗೃಹದಲ್ಲಿ ನಿನ್ನೆ ರಾತ್ರಿ ಆರಂಭವಾದ ತಪಾಸಣೆ ಇಂದು ಮುಂಜಾನೆ ಪೂರ್ಣಗೊಂಡಿತು. ತಪಾಸಣೆಯಲ್ಲಿ ಗಾಂಜಾ ಪೊಟ್ಟಣಗಳು, ಚಾಕು ಹಾಗೂ ಸಿಗರೇಟ್ ಕಟ್ಟೆಗಳು ಪತ್ತೆಯಾಗಿವೆ. ತಿರುವನಂತಪುರಂ, ಕಣ್ಣೂರು, ವಿಯ್ಯೂರು ಹಾಗೂ ತವನೂರು ಜೈಲುಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆಸಲಾಯಿತು. ಜೈಲುಗಳಿಗೆ ಬರುವ ಕೆಲವು ಆರೋಪಿಗಳು ಮಾದಕ ವಸ್ತುಗಳ ಕಳ್ಳಸಾಗಣೆ ಜಾಲದೊಂದಿಗೆ ಸಂಪರ್ಕ ಹೊಂದಿರುವುದು ಕೂಡ ಪತ್ತೆಯಾಗಿದೆ.

ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಣ್ಣೂರು ಕೇಂದ್ರ ಕಾರಾಗೃಹದಲ್ಲೂ ಗಾಂಜಾ, ಹಶೀಶ್ ಎಣ್ಣೆ ಹಾಗೂ ಮೊಬೈಲ್ ಚಾರ್ಜರ್ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಆರನೇ ಬ್ಲಾಕ್‌ನಿಂದ ವಶಪಡಿಸಿಕೊಳ್ಳಲಾಗಿದ್ದು, ಮೊದಲನೇ ಬ್ಲಾಕ್‌ನಿಂದ ಬೀಡಿಗಳನ್ನೂ ಪತ್ತೆಹಚ್ಚಲಾಗಿದೆ. ಈ ಸಂಬಂಧ ಜೈಲು ಅಧೀಕ್ಷಕರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಪರೇಷನ್ ತುಫಾನ್‌ನ ಅಂಗವಾಗಿ ರಾಜ್ಯವ್ಯಾಪಿ ನಡೆಸಿದ ಕಾರ್ಯಾಚರಣೆಯಲ್ಲಿ ನಿನ್ನೆ ಒಂದೇ ದಿನ 58 ಪ್ರಕರಣಗಳಲ್ಲಿ 62 ಮಂದಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಕಾರ್ಯಾಚರಣೆಯಡಿ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ *8,215ಕ್ಕೆ ಏರಿಕೆಯಾಗಿದೆ. ಇದುವರೆಗೆ ಒಟ್ಟು *8,835 ಮಂದಿಯನ್ನು ಬಂಧಿಸಲಾಗಿದೆ.

ಈವರೆಗೆ 6,675 ಗ್ರಾಂ ಎಂ.ಡಿ.ಎಂ.ಎ., 754 ಕೆ.ಜಿ. ಗಾಂಜಾ ಹಾಗೂ 295.057 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ನಿನ್ನೆ ದಾಖಲಾದ ಪ್ರಕರಣಗಳಲ್ಲಿ ಸಣ್ಣ ಪ್ರಮಾಣದ ಮಾದಕ ವಸ್ತು ಹೊಂದಿದ್ದಕ್ಕಾಗಿ 10 ಪ್ರಕರಣಗಳು, ಮಧ್ಯಮ ಪ್ರಮಾಣ ಹೊಂದಿದ್ದಕ್ಕಾಗಿ 4 ಪ್ರಕರಣಗಳು, ವಾಣಿಜ್ಯ ಪ್ರಮಾಣ ಹೊಂದಿದ್ದಕ್ಕಾಗಿ 1 ಪ್ರಕರಣ ದಾಖಲಾಗಿವೆ. ಜೊತೆಗೆ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ 43 ಪ್ರಕರಣಗಳು ಹಾಗೂ ಕೋಟ್ಪಾ (COTPA) ಕಾಯ್ದೆ ಅಡಿಯಲ್ಲಿ 23 ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ 17.490 ಗ್ರಾಂ ಎಂ.ಡಿ.ಎಂ.ಎ., 10.335 ಕೆ.ಜಿ. ಗಾಂಜಾ ಹಾಗೂ 218 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತುಗಳ ವಿರುದ್ಧದ ಜಾಗೃತಿ ಅಭಿಯಾನದ ಭಾಗವಾಗಿ ನಿನ್ನೆ ಮಾತ್ರ ರಾಜ್ಯದಾದ್ಯಂತ ಕೇರಳ ಪೊಲೀಸರು 65 ಜಾಗೃತಿ ತರಗತಿಗಳನ್ನು ನಡೆಸಿದ್ದಾರೆ. ಇದುವರೆಗೆ ಒಟ್ಟು 8,203 ಜಾಗೃತಿ ಕಾರ್ಯಕ್ರಮಗಳು ಹಾಗೂ 472 ಕೌನ್ಸೆಲಿಂಗ್ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಶಾಲೆ ಮತ್ತು ಕಾಲೇಜು ಪ್ರೊಟೆಕ್ಷನ್ ಗ್ರೂಪ್‌ಗಳ ನೇತೃತ್ವದಲ್ಲಿ 6,050 ಜಾಗೃತಿ ಕಾರ್ಯಕ್ರಮಗಳು ಸಹ ನಡೆದಿವೆ.

ಮಾದಕ ವಸ್ತುಗಳ ಮಾರಾಟ ಅಥವಾ ಕಳ್ಳಸಾಗಣೆ ಕುರಿತು ಸಾರ್ವಜನಿಕರು *9497979794, *9497927797 ಸಂಖ್ಯೆಗಳ ಮೂಲಕ ಅಥವಾ 9995966666 ವಾಟ್ಸ್ಆಪ್ ಸಂಖ್ಯೆಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣ ಗೌಪ್ಯವಾಗಿರಿಸಲಾಗುತ್ತದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!