ಕೇರಳದಲ್ಲಿ ಭಾರೀ ಮಳೆ ಆರ್ಭಟ: ಭೂಕುಸಿತಕ್ಕೆ 3 ಬಲಿ, 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ವ್ಯಾಪಕ ಹಾನಿ ಉಂಟಾಗಿದೆ. ಇಡುಕ್ಕಿ ಹಾಗೂ ಕೋಟಾಯಂ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಇಡುಕ್ಕಿ, ಪತ್ತನಂತಿಟ್ಟ ಮತ್ತು ಕೋಟಾಯಂ ಜಿಲ್ಲೆಗಳಲ್ಲಿ ಒಟ್ಟು ಮೂವರು ಮೃತಪಟ್ಟಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ರನ್ನಿ ಪಟ್ಟಣದಲ್ಲಿ ಪ್ರವಾಹದ ನೀರು ನುಗ್ಗಿದೆ. ಪತ್ತನಂತಿಟ್ಟ, ಕೋಟಾಯಂ, ಇಡುಕ್ಕಿ, ಮಲಪ್ಪುರಂ ,ಕೊಜ್ಹಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಅಡೂರ್ಮಲ ಪ್ರದೇಶದಲ್ಲಿ ಭೂಕುಸಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪಯ್ಯಾನಿತ್ತೊಟ್ಟಂನಲ್ಲಿ ಮನೆಯ ಮೇಲಕ್ಕೆ ಮಣ್ಣು ಕುಸಿದು ಬಿದ್ದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದು, ಅವರ ತಾಯಿ ನಾಪತ್ತೆಯಾಗಿದ್ದಾರೆ.ಕೋಲಾಹಲಮೇಟಿನಲ್ಲಿ ಮಣ್ಣು ಕುಸಿದು 72 ವರ್ಷದ ವೃದ್ಧರು ಮೃತಪಟ್ಟಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಎರ್ನಾಕುಳಂ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪೆರಿಯಾರ್ ನದಿಯ ನೀರಿನ ಮಟ್ಟ ಸುಮಾರು ಮೂರು ಅಡಿ ಏರಿಕೆಯಾಗಿದ್ದು, ಆಲುವ ಶಿವ ದೇವಸ್ಥಾನ ಸೇರಿದಂತೆ ಹಲವೆಡೆ ನೀರು ನುಗ್ಗಿದೆ.

ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಅಗತ್ಯವಿಲ್ಲದಿದ್ದರೆ ವಯನಾಡಿಗೆ ಪ್ರಯಾಣಿಸಬಾರದು ಎಂದು ಸೂಚಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಇರುವ ಪ್ರವಾಸಿಗರು ಸುರಕ್ಷಿತ ಸ್ಥಳಗಳಲ್ಲೇ ತಂಗಬೇಕು ಹಾಗೂ ಅನಗತ್ಯ ಸಂಚಾರ ಮತ್ತು ಪ್ರವಾಸಿ ತಾಣಗಳ ಭೇಟಿ ತಪ್ಪಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡುವ ಅಧಿಕೃತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.

ಅತಿಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ರಾಣಿಪುರಂ ಹಿಲ್ ಸ್ಟೇಷನ್ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನದಿಗಳು, ಹೊಳೆಗಳು ಹಾಗೂ ಇತರೆ ಜಲಾಶಯಗಳಲ್ಲಿ ಎಲ್ಲಾ ರೀತಿಯ ಪ್ರವಾಸಿ ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ.

ತಿರುವನಂತಪುರದ ಪ್ರಮುಖ ಪ್ರವಾಸಿ ತಾಣವಾದ ಪೊನ್‌ಮುಡಿ ಇಕೋ ಟೂರಿಸಂ ಕೇಂದ್ರವನ್ನು ಭೂಕುಸಿತದ ಕಾರಣದಿಂದ ಮುಚ್ಚಲಾಗಿದೆ. ಕಲ್ಲಾರ್–ಪೊನ್‌ಮುಡಿ ರಸ್ತೆಯ 12ನೇ ತಿರುವು ಹಾಗೂ 22ನೇ ತಿರುವಿನ ಸಮೀಪ ಭೂಕುಸಿತ ಸಂಭವಿಸಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಪಾಲಕ್ಕಾಡು ಜಿಲ್ಲೆಯ ನೆಲ್ಲಿಯಾಂಪತಿ ಸೇರಿದಂತೆ ಮಲೆನಾಡು ಪ್ರದೇಶಗಳ ಎಲ್ಲಾ ಪ್ರವಾಸಿ ತಾಣಗಳಿಗೂ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಮಲಂಪುಜ್ಹ ಅಣೆಕಟ್ಟಿನ ಕವಯಿ ಪ್ರದೇಶಕ್ಕೂ ಪ್ರವೇಶ ನಿರ್ಬಂಧಿಸಲಾಗಿದೆ. ಅಚ್ಚನ್ಕೋವಿಲ್ ಅರಣ್ಯ ಪ್ರದೇಶದಲ್ಲಿಯೂ ಭಾರೀ ಮಳೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!