ಕಾಸರಗೋಡು: ಇಲ್ಲಿನ ಚೆರ್ಕಳ ಬೇವಿಂಜೆ ಗುಡ್ಡೆಯಲ್ಲಿ ಚಲಿಸುತ್ತಿದ್ದ ಕಾರೊಂದು ಇಂದು ಬೆಳಿಗ್ಗೆ ಹೊತ್ತಿ ಉರಿದಿದೆ.
ಕಾರಿನಲ್ಲಿದ್ದ ಐವರ ತಂಡ ಅದೃಷ್ಟವಶಾತ್ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ನ್ಯೂ ಮುಂಬೈಯಿಂದ ಕೇರಳದ ಕಣ್ಣೂರು ಜಿಲ್ಲೆಯ ಕಣ್ಣೋಪುರಂಗೆ ಬರುತ್ತಿದ್ದ ಸಿಎನ್ ಜಿ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಇವರು ಮುಂಬೈಯಿಂದಲೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ.
ಚೆರ್ಕಳ ದಾಟುತ್ತಿದ್ದಂತೆಯೇ ಕಾರಿನಿಂದ ಹೊಗೆ ಏಳುವುದನ್ನು ಗಮನಿಸಿದ ಚಾಲಕ ಇಕ್ಬಾಲ್ ಅಹಮ್ಮದ್ ಕುಟ್ಟಿ ಬೇವಿಂಜೆಯಲ್ಲಿ ಕಾರು ನಿಲ್ಲಿಸಿ ಅದರಲ್ಲಿ ನಿದ್ದೆಯಲ್ಲಿದ್ದ ಪತ್ನಿ ಮಕ್ಕಳನ್ನು ಎಚ್ಚರಿಸಿ ಕೆಳಗಿಳಿಸಿದರು. ಅಷ್ಟರಲ್ಲೇ ಕಾರಿಗೆ ಬೆಂಕಿ ಹತ್ತಿಕೊಂಡಿತ್ತು.ಆತುರದಲ್ಲಿ ಕಾರಿನಿಂದ ಇಳಿಯುವಾಗ ತಮ್ಮ ಹಣ, ಕ್ಯಾಮರ,ಮೊಬೈಲ್ ಫೋನ್ ಮತ್ತಿತರ ವಸ್ತುಗಳು ತೆಗೆಯಲು ಮರೆತಿದ್ದು, ಅದು ಕಾರಿನೊಂದಿಗೆ ಹೊತ್ತಿ ಉರಿದಿವೆ.