ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿಯಾಗಿದ್ದ ಕೆಎಂ ಅಶ್ರಫ್ ಅವರು ತಮ್ಮ ನಾಮನಿರ್ದೇಶನ ಪತ್ರಿಕೆಯನ್ನು ಹಿಂಪಡೆದಿದ್ದಾರೆ.
ಗುರುವಾರ ಬೆಳಿಗ್ಗೆ ಉಪ್ಪಳದಲ್ಲಿ ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಲತೀಫ್ ಅವರ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ತೀವ್ರ ಚರ್ಚೆಗಳು ನಡೆದಿರುವುದಾಗಿ ತಿಳಿದುಬಂದಿದೆ. ಸಭೆಯಿಂದ ಹೊರಬಂದ ಬಳಿಕ ಮಧ್ಯಾಹ್ನ ವೇಳೆಗೆ ಅಶ್ರಫ್ ಅವರು ಕಲೆಕ್ಟರೇಟ್‌ಗೆ ತೆರಳಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.
ಪಕ್ಷದ ಅಭ್ಯರ್ಥಿತ್ವ ಹಿಂಪಡೆಯುವ ವಿಚಾರವಾಗಿ ನಡೆದ ಸಭೆಯಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು ಎನ್ನಲಾಗುತ್ತಿದೆ. “ಪಕ್ಷದ ಸೂಚನೆಯ ಮೇರೆಗೆ ನಾನು ನಾಮಪತ್ರ ಸಲ್ಲಿಸಿದ್ದೆ. ಇದೇ ನಾಯಕತ್ವ ಇದೀಗ ಹಿಂಪಡೆಯಲು ಸೂಚಿಸುವುದು ಸರಿಯಾದ ಕ್ರಮವಲ್ಲ” ಎಂದು ಹೇಳಿ ಸಭೆಯಿಂದ ಹೊರನಡೆದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ. ಇದೇ ವೇಳೆ ಕೆಎಂ ಅಶ್ರಫ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.