ಮಂಗಳೂರು: ತುಳುನಾಡಿನ ಪರಂಪರೆಯ ಜೀವನಾಡಿಯಾಗಿರುವ ಕಂಬಳ ಜಾನಪದ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗುರುಪುರದ ಮಾಣಿಬೆಟ್ಟುವಿನಲ್ಲಿ ಏಪ್ರಿಲ್ 4ರಂದು ಶನಿವಾರ 3ನೇ ವರ್ಷದ ಹೊನಲು ಬೆಳಕಿನ “ಮೂಳೂರು–ಅಡ್ಡೂರು” ಜೋಡುಕರೆ ಕಂಬಳವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಇನಾಯತ್ ಅಲಿ ತಿಳಿಸಿದ್ದಾರೆ.
ನಗರದ ಓಷನ್ ಪರ್ಲ್ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಕಂಬಳ ಕೇವಲ ಕ್ರೀಡೆಯಲ್ಲ, ಇದು ನಮ್ಮ ಮಣ್ಣಿನ ಸಂಸ್ಕೃತಿ. ಜಾತಿ, ಮತ, ಪಕ್ಷ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಹಬ್ಬವಾಗಿದ್ದು, ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ನಮ್ಮ ಮುಖ್ಯ ಉದ್ದೇಶ” ಎಂದು ಹೇಳಿದರು.
ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಕಂಬಳ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರ ಜೊತೆಗೆ ಮೈಸೂರು ದಸರಾ ಉತ್ಸವದಲ್ಲಿಯೂ ಕಂಬಳ ಆಯೋಜನೆ ಮಾಡುವ ಭರವಸೆ ನೀಡಿರುವುದಾಗಿ ತಿಳಿಸಿದರು. ಪೇಟಾ ಸಂಬಂಧಿತ ಅಡೆತಡೆಗಳಿಂದ ಕಳೆದ ಬಾರಿ ಸಾಧ್ಯವಾಗದಿದ್ದರೂ ಈ ಬಾರಿ ದಸರಾದಲ್ಲಿ ಕಂಬಳ ನಡೆಯುವ ನಿರೀಕ್ಷೆ ಇದೆ ಎಂದರು.
ಏಪ್ರಿಲ್ 4ರಂದು ಬೆಳಿಗ್ಗೆ 8:30ಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಂಬಳವನ್ನು ಉದ್ಘಾಟಿಸಲಿದ್ದಾರೆ. ಸಂಜೆ 6:30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಂಸದ ಹಾಗೂ ಬಮೂಲ್ ಬೆಂಗಳೂರು ಅಧ್ಯಕ್ಷ ಡಿ.ಕೆ. ಸುರೇಶ್ ಉದ್ಘಾಟಿಸಲಿದ್ದು, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಈ ಬಾರಿಯ ಕಂಬಳದಲ್ಲಿ ಭಾಗವಹಿಸುವ ಪ್ರತಿಯೊಂದು ಕೋಣಗಳ ಮಾಲೀಕರಿಗೆ ಬೆಳ್ಳಿಯ ನಾಣ್ಯ ಹಾಗೂ 30 ಕೆಜಿ ಹುರುಳಿ ವಿತರಿಸಲಾಗುವುದು. ಕಣೆಹಲಗೆ ವಿಭಾಗದಲ್ಲಿ ನಿಗದಿತ ಎತ್ತರಕ್ಕೆ ನೀರು ಹಾಯಿಸಿದ ಕೋಣಗಳಿಗೆ ತಲಾ 1 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಜೊತೆಗೆ ಯಕ್ಷಗಾನ ಸಾಧಕರಿಗೆ ಸನ್ಮಾನ ಹಾಗೂ ಫುಡ್ ಫೆಸ್ಟಿವಲ್ ಕೂಡ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ಗುಣಪಾಲ ಕಡಂಬ, ರಾಜ ಕಂಬಳ ಅಸೋಸಿಯೇಷನ್ ಪದಾಧಿಕಾರಿ ಲೋಕೇಶ್ ಶೆಟ್ಟಿ, ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಹಾಗೂ ಆರ್ ಕೆ ಪೃಥ್ವಿರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.