ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಗಡಿಭಾಗದ ಪ್ರತಿಷ್ಠಿತ ಕ್ಷೇತ್ರವಾದ ಮಂಜೇಶ್ವರದಲ್ಲಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಗೆಲುವಿಗಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಇಂದು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದರು.
ಕ್ಷೇತ್ರದಾದ್ಯಂತ ಸಂಚರಿಸಿದ ಶಾಸಕ ವೇದವ್ಯಾಸ ಕಾಮತ್ ಅವರು, ಮಂಜೇಶ್ವರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮದನಂತೇಶ್ವರ ದೇವಸ್ಥಾನ ಹಾಗೂ ಕೀರ್ತೇಶ್ವರ ಪರಿಸರಗಳಲ್ಲಿ ಕಾರ್ಯಕರ್ತರೊಂದಿಗೆ ಮನೆ-ಮನೆಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮತದಾರರೊಂದಿಗೆ ಸಂವಾದ ನಡೆಸಿದ ಅವರು, ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
”ಈ ಬಾರಿ ಮಂಜೇಶ್ವರದಲ್ಲಿ ತಾವರೆ ಅರಳುವುದು ನಿಶ್ಚಿತ”
ಪ್ರಚಾರದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
”ಮಂಜೇಶ್ವರದಲ್ಲಿ ಈ ಬಾರಿ ತಾವರೆ ಅರಳುವ ಎಲ್ಲಾ ಪೂರಕ ವಾತಾವರಣ ನಿರ್ಮಾಣವಾಗಿದೆ. ಮತದಾರರು ಪ್ರಧಾನಿ ಮೋದಿಯವರ ಅಭಿವೃದ್ಧಿ ಮಂತ್ರ ಹಾಗೂ ಕೆ. ಸುರೇಂದ್ರನ್ ಅವರ ನಾಯಕತ್ವದ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ. ಕಾರ್ಯಕರ್ತರ ಉತ್ಸಾಹ ನೋಡುತ್ತಿದ್ದರೆ ಮಂಜೇಶ್ವರದಲ್ಲಿ ಬಿಜೆಪಿ ಇತಿಹಾಸ ನಿರ್ಮಿಸುವುದು ಖಚಿತ” ಎಂದು ಅವರು ನುಡಿದರು.
ಪ್ರಚಾರ ಕಾರ್ಯದಲ್ಲಿ ಶಾಸಕರೊಂದಿಗೆ ಬಿಜೆಪಿಯ ಪ್ರಮುಖ ನಾಯಕರಾದ:ಯಾದವ ಬಡಾಜೆ,ಆದರ್ಶ್,ಹರೀಶ್ಚಂದ್ರ ಮಂಜೇಶ್ವರ ಸೇರಿದಂತೆ ಕ್ಷೇತ್ರದ ಹಿರಿಯ ನಾಯಕರು ಹಾಗೂ ನೂರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತರು ಭಾಗವಹಿಸಿ ಅಭ್ಯರ್ಥಿಯ ಪರ ಘೋಷಣೆಗಳನ್ನು ಕೂಗುತ್ತಾ ಚುನಾವಣಾ ಕಣದಲ್ಲಿ ಚೈತನ್ಯ ತುಂಬಿದರು. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ, ಬಿಜೆಪಿ ಪಡೆ ಕ್ಷೇತ್ರದ ಪ್ರತಿಯೊಂದು ಮತಗಟ್ಟೆ ಮಟ್ಟದಲ್ಲಿ ಪ್ರಚಾರವನ್ನು ತೀವ್ರಗೊಳಿಸಿದೆ