ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಪರ ರಾಜೇಶ್ ನಾಯ್ಕ್ ಮನೆಮನೆಗೆ ಮತಯಾಚನೆ

ಮಂಜೇಶ್ವರ, ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು Bharatiya Janata Party (ಬಿಜೆಪಿ) ಪರ ಪ್ರಚಾರ ಚಟುವಟಿಕೆಗಳು ತೀವ್ರಗೊಂಡಿವೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಕೆ. ಅವರ ಪರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗಡಿಮುಗೇರು ಮತ್ತು ದೇಲಂಪಾಡಿ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.

ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ಬಾರಿ ನಿಮ್ಮ ಮತವನ್ನು ಬದಲಾಯಿಸಿ ನೋಡಿ, ಬದಲಾವಣೆಯ ಹೊಸ ರೂಪ ನಿಮಗೆ ತಿಳಿಯುತ್ತದೆ” ಎಂದು ಮನವಿ ಮಾಡಿದರು. ಜೊತೆಗೆ, ನರೇಂದ್ರ ಮೋದಿ ಅವರ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸುರೇಂದ್ರನ್ ಕೆ. ಅವರು ಶ್ರಮಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರೊಂದಿಗೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಅವಲೋಕನ ನಡೆಸಿದ ರಾಜೇಶ್ ನಾಯ್ಕ್, ಕಾರ್ಯಕರ್ತರ ಹುರುಪು ಹೆಚ್ಚಿಸಲು ಸಲಹೆಗಳನ್ನು ನೀಡಿದರು. ಪ್ರತಿಯೊಂದು ಮನೆಯ ಸಂಪರ್ಕ ಸಾಧಿಸುವುದರೊಂದಿಗೆ ಮತದಾರರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಮಾವೆ, ಬಂಟ್ವಾಳ ಬಿಜೆಪಿ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಅಜಿತ್ ಶೆಟ್ಟಿ ಕಾವಳಮೂಡೂರು, ಕುಮಾರ್ ಅಳ್ವ, ಮಂಜೇಶ್ವರ ಕ್ಷೇತ್ರದ ಬಿ.ಎಂ.ಎಸ್. ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಪುತ್ತಿಗೆ ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ದೇರಡ್ಕ, ಬೂತ್ ಅಧ್ಯಕ್ಷ ಕೇಶವ ಮುಗು ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!