ಕಾಸರಗೋಡಿನಲ್ಲಿ ಚುಟುಕು ಸಾಹಿತ್ಯೋತ್ಸವ-2026: ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯ

ಕಾಸರಗೋಡು: ಚುಟುಕು ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಕವಿಗಳು ಹಾಗೂ ಸಾಹಿತಿಗಳಲ್ಲಿರುವ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಚುಟುಕು ಸಾಹಿತ್ಯೋತ್ಸವ–2026 ಹಾಗೂ ಕಾಸರಗೋಡು-ಕರ್ನಾಟಕ ಚುಟುಕು ಕವಿಗೋಷ್ಠಿ ಭರ್ಜರಿಯಾಗಿ ನಡೆಯಿತು. ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾಗಿ 2000ರಲ್ಲಿ ಸ್ಥಾಪನೆಯಾದ ಕಾಸರಗೋಡು ಜಿಲ್ಲಾ ಘಟಕವು ಕಳೆದ 26 ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಹಾಗೂ ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಹೇಳಿದರು.

ಕಾಸರಗೋಡಿನ ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಮುಖಂಡ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಅವರು, ಶೀಘ್ರದಲ್ಲೇ ಪ್ರಥಮ ಕೇರಳ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕಾಸರಗೋಡು ಜಿಲ್ಲಾ 8ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಕೇರಳ ಹಾಗೂ ಕರ್ನಾಟಕ ರಾಜ್ಯಗಳಿಂದ 100ಕ್ಕೂ ಹೆಚ್ಚು ಚುಟುಕು ಕವಿಗಳು ಭಾಗವಹಿಸಲಿದ್ದು, ಸ್ವರಚಿತ ಕವಿತೆಗಳ ವಾಚನ ನಡೆಯಲಿದೆ ಎಂದರು.

ಪ್ರತಿ ತಿಂಗಳು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಚುಟುಕು ಸಾಹಿತ್ಯೋತ್ಸವವನ್ನು ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು. ಕವಿ ಹಾಗೂ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ದಿಕ್ಸೂಚಿ ಭಾಷಣ ನೀಡಿದರು.ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ., ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿ, ವೆಂಕಟ್ ಭಟ್ ಎಡನೀರು, ಕವಯತ್ರಿ ದಿವ್ಯ ಗಟ್ಟಿ, ಜಯಾನಂದ ಕುಮಾರ್ ಹೊಸದುರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ನಡೆದ ಕಾಸರಗೋಡು-ಕರ್ನಾಟಕ ಚುಟುಕು ವಾಚನಗೋಷ್ಠಿಯಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ಚುಟುಕು ಕವಿಗಳು ಭಾಗವಹಿಸಿ ಕವನ ವಾಚನ ನಡೆಸಿದರು. ವೆಂಕಟ್ ಭಟ್ ಎಡನೀರು ಅವರ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತ ಹಾಗೂ ಕವಿ ಶ್ರೀಕಾಂತ ಕಾಸರಗೋಡು ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕವಿಗಳಿಗೆ ಗೌರವಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.ಮಾಜಿ ಕೌನ್ಸಿಲರ್ ಶಂಕರ ಜೆ.ಪಿ ನಗರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ ಕೂಡ್ಲು ಧನ್ಯವಾದ ಸಲ್ಲಿಸಿದರು. ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!