ಕಾಸರಗೋಡು/ಮೈಸೂರು:
ಗಡಿನಾಡ ಕಾಸರಗೋಡಿನಲ್ಲಿ ಕನ್ನಡ ಸೇವೆಗಾಗಿ ನಿರಂತರವಾಗಿ ದುಡಿಯುತ್ತಿರುವ ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅವರಿಗೆ ಪ್ರತಿಷ್ಠಿತ “ಹೊಯ್ಸಳ ಪ್ರಶಸ್ತಿ–2025” ಪ್ರದಾನ ಮಾಡಲಾಗಿದೆ.
ಮೈಸೂರಿನ ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏಪ್ರಿಲ್ 5, 2026ರಂದು ನಡೆದ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.
ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಪುಸ್ತಕಪ್ರೇಮಿ ಅಂಕೆಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಗಡಿನಾಡ ಕಾಸರಗೋಡಿನಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ 15 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿಯಾಗಿರುವ ಡಾ. ವಾಮನ್ ರಾವ್ ಬೇಕಲ್ ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾಗಿದ್ದು, ಕರ್ನಾಟಕದ ಸುಮಾರು 18 ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿ ಕನ್ನಡದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.
ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ವಿ. ಲಕ್ಷ್ಮೀನಾರಾಯಣ ಹಾಗೂ ಡಾ. ಕೆ. ಲೀಲಾ ಪ್ರಸಾದ್ ಭಾಗವಹಿಸಿದ್ದರು.
ಮೈಸೂರು ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಹಾಗೂ ಹಿರಿಯ ಸಮಾಜಸೇವಕ ರಘುರಾಮ್ ವಾಜಪೇಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ರಂಗನಾಥ್ ಮೈಸೂರು ಸ್ವಾಗತಿಸಿ ಪ್ರಸ್ತಾವನೆ ಮಂಡಿಸಿದರು. ವಿಜಯಲಕ್ಷ್ಮಿ ರಂಗನಾಥ್ ಪ್ರಾರ್ಥನೆ ನಡೆಸಿದರು. ಕಾರ್ಯಕ್ರಮವನ್ನು ಮಾನುಷ್ ನಿರೂಪಿಸಿದರು.
ಈ ಪ್ರಶಸ್ತಿ ಮೂಲಕ ಗಡಿನಾಡದಲ್ಲಿ ಕನ್ನಡದ ಬೆಳವಣಿಗೆಗೆ ಡಾ. ಬೇಕಲ್ ಅವರ ಕೊಡುಗೆಗೆ ರಾಜ್ಯ ಮಟ್ಟದಲ್ಲಿ ಗೌರವ ವ್ಯಕ್ತವಾಗಿದೆ.