ಕುಂಬಳೆ (ಕಾಸರಗೋಡು):
ಮುಸ್ಲಿಂ ಲೀಗ್ ನಾಯಕರು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲವೆಂದು ಆರೋಪಿಸಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಬ್ದುಲ್ಲ ಮಾಸ್ಟರ್ ಕಣ್ಣೂರು ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಅಲ್ಪ ಮತಾಂತರದಲ್ಲಿ ಜಯಗಳಿಸಿದ್ದ ಮುಸ್ಲಿಂ ಲೀಗ್ ಪಕ್ಷವನ್ನು ಮತ್ತೆ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸುತ್ತಿರುವ ಸಂದರ್ಭದಲ್ಲೇ, ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಅಬ್ದುಲ್ಲ ಮಾಸ್ಟರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸುಮಾರು 14 ವರ್ಷಗಳ ಹಿಂದೆ ತನ್ನ ಪುತ್ರ ಮೊಹಮ್ಮದ್ ಇರ್ಷಾದ್ ಮೂಲಕ, ಲೀಗ್ ನಾಯಕ ಪಾರಕ್ಕಲ್ ಅಬ್ದುಲ್ಲ ಅವರ ಸಂಬಂಧಿಕರಿಗೆ ಖತಾರ್‌ನಲ್ಲಿ ವ್ಯಾಪಾರ ಉದ್ದೇಶಕ್ಕಾಗಿ ₹1.18 ಕೋಟಿ ಹಣ ನೀಡಲಾಗಿದ್ದು, ಅದು ಮರಳಿ ಸಿಗದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿತ್ತು. ಆ ಸಂದರ್ಭದಲ್ಲಿ ಪಿ.ಕೆ. ಕುನ್ಹಾಲಿಕುಟ್ಟಿ ಸೇರಿದಂತೆ ಹಲವು ನಾಯಕರು ಹಣವನ್ನು ವಾಪಸು ಕೊಡಿಸುವ ಭರವಸೆ ನೀಡಿದ್ದರೂ, ಬಳಿಕ ಅದು ಈಡೇರಿಸಲಿಲ್ಲ ಎಂದು ಅಬ್ದುಲ್ಲ ಮಾಸ್ಟರ್ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಲವು ಬಾರಿ ನಾಯಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಫಲ ಸಿಗದ ಕಾರಣ, ಅವರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಪ್ರಸ್ತುತ ಶಾಸಕ ಹಾಗೂ ಲೀಗ್ ಮಂಡಲ ಕಾರ್ಯದರ್ಶಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಇರ್ಷಾದ್, ಜಮಾಲ್ ಪುತ್ತಿಗೆ, ಸಿರಾಜ್ ಕಣ್ಣೂರು, ಸಫ್ವಾನ್ ಮೊಗ್ರಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.